ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಗಡಿ ತಾಲೂಕು ಹರಪನಹಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತ್ತಲ್ಲದೆ, ಹಲವು ವಿಶೇಷತೆಗಳಿಗೂ ಸಾಕ್ಷಿಯಾಯಿತು.
ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಬಾಬು ಜಗಜೀವನ್ ರಾವ್ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಚಿಗಟೇರಿ ಗ್ರಾಮದಿಂದ ಬೆಣ್ಣಿಹಳ್ಳಿ, ಪೃಥ್ವೇಶ್ವರ, ಲೋಲೇಶ್ವರಕ್ಕೆ ಮಾರ್ಗದ ರಸ್ತೆಯನ್ನು ಕಳೆದ ತಿಂಗಳಲ್ಲಿ ಅಗೆದು ಮುಳ್ಳು ಕಂಟಿಯನ್ನು ಹಾಕಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿರುವುದನ್ನು ಸರಿಪಡಿಸಬೇಕು ಎಂದು ಅಹವಾಲು ಸಲ್ಲಿಸಿದರು. ಜಿಲ್ಲಾಧಿಕಾರಿಗಳು ಶೀಘ್ರದಲ್ಲೇ ಚಿಗಟೇರಿ ಗ್ರಾಮಕ್ಕೆ ತಹಸೀಲ್ದಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳನ್ನು ಕಳುಹಿಸಿ ಸರಿಪಡಿಸಿಕೊಡುತ್ತೇವೆಂದು ಭರವಸೆ ನೀಡಿದರು.
ಅರಸೀಕೆರೆ ಗ್ರಾಮಸ್ಥರು, ಎಲ್ಲರಿಗೂ ಅನುಕೂಲವಾಗುವಂತೆ ಸೂಕ್ತವಾದ ನಾಡಕಚೇರಿ ನಿರ್ಮಿಸಬೇಕು ಮತ್ತು ಹಲವು ದಿನಗಳಿಂದ ಅರ್ಧಕ್ಕೆ ನಿಂತಿರುವ ಬಸ್ ನಿಲ್ದಾಣವನ್ನು ಪೂರ್ಣಗೊಳಿಸಿ ಅಕ್ಕಪಕ್ಕದ ಹಳ್ಳಿಗಳಿಗೆ ಸಾರಿಗೆ ಸೌಲಭ್ಯದ ವ್ಯವಸ್ಥೆ ಮಾಡಿಕೊಡವಂತೆ ಮನವಿ ಸಲ್ಲಿಸಿದರು.
ಕೂಲಹಳ್ಳಿ ಗ್ರಾಮ ಪಂಚಾಯ್ತಿಯ ದುರುಗಪ್ಪ ಎನ್ನವವರಿಗೆ ಸೇರಿದ ಮನೆಯ ಇ-ಸ್ವತ್ತು ಮಾಡಿಕೊಡಲು ಬಿಲ್ ಕಲೆಕ್ಟರ್ 60 ಸಾವಿರ ರೂ ಬೇಡಿಕೆ ಇಟ್ಟು ವರ್ಷಾನುಗಟ್ಟಲೆ ಅಲೆದಾಡಿಸಿರುವ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಇಓ ಹಾಗೂ ಗ್ರಾ.ಪಂ ಅಧಿಕಾರಿಯನ್ನು ಕರೆಯಿಸಿ, ಲಂಚ ಕೇಳಿದ್ದು ಸತ್ಯವಿದ್ದಲ್ಲಿ ಬಿಲ್ ಕಲೆಕ್ಟರ್ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಎಚ್ಚರಿಕೆ ನೀಡಿ ಶೀಘ್ರದಲ್ಲಿಯೇ ಇವರ ಸಮಸ್ಯೆಯನ್ನು ಸರಿಪಡಿಸಿಕೊಡಿ ಎಂದು ಸೂಚಿಸಿದರು.
ರೈತನೊಬ್ಬ ಹರಪನಹಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ತಾನು ಬೆಳೆದ ಬೆಳೆಯನ್ನು ಸರ್ಕಾರದ ನಿಗದಿತ ಬೆಲೆಯಂತೆ ಒಟ್ಟು 2.7 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಆದರೆ ಆತನ ಖಾತೆಗೆ ಮಾರುಕಟ್ಟೆಯವರು ಹಣ ವರ್ಗಾವಣೆ ಮಾಡಿದ್ದೇವೆಂದು ಕಳುಹಿಸಿದ್ದಾರೆ. ಮರುದಿನ ಖಾತೆಗೆ ಹಣ ಬರದೆ ಇದ್ದ ಕಾರಣ ಮತ್ತೆ ಎಪಿಎಂಸಿ ಅಧಿಕಾರಿಗಳ ಬಳಿ ಹಣ ಬಂದಿಲ್ಲವೆಂದು ಹೇಳಿದ್ದಾನೆ, ನಿನು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸು, ಹಣ ಬರುತ್ತದೆ ಎಂದು ಪದೇ ಪದೇ ತಿಂಗಳಾನಗಟ್ಟಲೆ ಅಲೆದಾಡಿಸಿದ್ದಾರೆ ಎಂಬ ದೂರನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಕೃಷಿ ಅಧಿಕಾರಿಗಳನ್ನು ಕರೆದು ರೈತರಿಗೆ ಯಾವುದೇ ತಾಂತ್ರಕ ದೋಷದ ನೆಪ ಹೇಳದೆ ಮೊದಲು ಸರಿಪಡಿಸಿಕೊಡಿ ಎಂದು ಗದರಿಸಿದರು.
ಸಾರ್ವಜನಿಕರು ಸಲ್ಲಿಸದ ಅರ್ಜಿಗಳ ಪರಿಶೀಲನೆ ವೇಳೆ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀರ್ವ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜನಸ್ಪಂದನ ಕಾರ್ಯಕ್ರಮಕ್ಕೆ ಹಾಜರಾಗದ ಪಿಡಿಓಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಜನಸ್ಪಂದನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಎದುರಿಗೇ ಅರ್ಜಿದಾರರೊಬ್ಬರಿಗೆ ಏಕವಚನದಲ್ಲಿ ಸಂಬೋಧಿಸಿದ ಪಿಡಿಓ ಒಬ್ಬರನ್ನು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡರು. ನಮ್ಮದುರೇ ಇಷ್ಟು ಜೋರಾಗಿ ಮಾತನಾಡುವ ನೀವು, ಪಂಚಾಯಿತಿ ಕಚೇರಿಯಲ್ಲಿ ಹೇಗೆ ಮಾತನಾಡುತ್ತೀರಿ? `ಯೂಸ್‌ಲೆಸ್ ಫೆಲೋ’. ನಾವು ಸಾರ್ವಜನಿಕರ ಕೆಲಸ ಮಾಡಲು ಬಂದಿರುವುದು. ಸೌಜನ್ಯದಿಂದ ಮಾತನಾಡಿ. ಬಿಲ್ ಬಂದಿಲ್ಲ ಅಂತ ಕೇಳುತ್ತಿರುವ ಅವರಿಗೆ ಸಮಾಧಾನದಿಂದ ಉತ್ತರಿಸಿ. ಏನು ಸಮಸ್ಯ ಆಗಿದೆ ಎಂದು ನೋಡಿ, ತಿಳಿಸಿ ಹೇಳಬೇಕು. ಒಂದು ಕೆಲಸ ಕಡಿಮೆ ಆದರೂ ಸರಿ, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಝಾಡಿಸಿದರು.
ಸೈಕಲ್‌ನಲ್ಲಿ ಸಿಟಿ ರೌಂಡ್!
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹರಪನಹಳ್ಳಿಯಲ್ಲಿ ವಿನೂತನವಾಗಿ ಸೈಕಲ್ ಮೂಲಕ ಸಿಟಿ ರೌಂಡ್ ನಡೆಸಿ, ಸಾರ್ವಜನಿಕರ ಸಮಸ್ಯೆಗಳನ್ನ ಆಲಿಸಿದರು. ತರಕಾರಿ ಮಾರುಕಟ್ಟೆ, ಬಸ್ ನಿಲ್ದಾಣದ ಶೌಚಾಲಯ, ಅಂಗನವಾಡಿ ಕೇಂದ್ರ ಹಾಗೂ ಶಾಲೆಗಳಿಗೆ ಭೇಟಿ ನೀಡಿದರು. ಪಟ್ಟಣದ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ದಾಖಲಾತಿಗಳ ಪರಿಶೀಲಿಸಿದರು.ಅಷ್ಟೇ ಅಲ್ಲದೆ, ಗಲ್ಲಿ ಗಲ್ಲಿಗಳಲ್ಲಿ ಸೈಕಲ್ ಸವಾರಿ ಮಾಡಿ, ತರಕಾರಿ ಮಾರುಕಟ್ಟೆಯಲ್ಲಿ ಸಾರ್ವಜನಿಕರೊಂದಿಗೆ ಚಹಾ ಸೇವಿಸಿ, ಸಂಚಲನ ಮೂಡಿಸಿದರು.