ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಸರ್ಕಾರವು ನಗರಾಭಿವೃದ್ಧಿ ಇಲಾಖೆಯ ಮೂಲಕ ಜಾರಿಗೆ ತಂದಿರುವ ಯುಐಒಎಸ್ (ಯುನಿಫೈಡ್ ಬಿಲ್ಡಿಂಗ್ ಪರ್ಮಿಷನ್ ಸಿಸ್ಟಮ್) ತಂತ್ರಾಂಶವು ಗದಗ-ಬೆಟಗೇರಿ ನಗರಸಭಾ ವ್ಯಾಪ್ತಿಯಲ್ಲಿ ಗಂಭೀರ ತಾಂತ್ರಿಕ ದೋಷಗಳಿಂದ ಕೂಡಿದ್ದು, ಇದರ ಪರಿಣಾಮವಾಗಿ ಕಟ್ಟಡ ಅನುಮತಿ (ಬಿಲ್ಡಿಂಗ್ ಪರ್ಮಿಷನ್) ಪ್ರಕ್ರಿಯೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ ಎಂದು ಗದಗ ಜಿಲ್ಲಾ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಯುಐಒಎಸ್ ತಂತ್ರಾಂಶದಲ್ಲಿ ನಿರಂತರವಾಗಿ ಲಾಗಿನ್ ಸಮಸ್ಯೆ, ದಾಖಲೆಗಳ ಅಪ್‌ಲೋಡ್ ವಿಫಲತೆ, ಸಿಸ್ಟಮ್ ಎರರ್‌ಗಳು ಹಾಗೂ ತಾಂತ್ರಿಕ ವೈಫಲ್ಯಗಳು ಎದುರಾಗುತ್ತಿದ್ದು, ಸಾರ್ವಜನಿಕರು ಮತ್ತು ವೃತ್ತಿಪರ ಇಂಜಿನಿಯರ್‌ಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಕಟ್ಟಡ ಅನುಮತಿ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬ ಉಂಟಾಗಿ ನಾಗರಿಕರ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತಿದೆ.
ಯುಐಒಎಸ್ ತಂತ್ರಾಂಶದಲ್ಲಿ ಡಿಪ್ಲೋಮಾ ಸಿವಿಲ್ ಇಂಜಿನಿಯರ್‌ಗಳನ್ನು “ಸೂಪರ್ವೈಸರ್” ಎಂದು ಉಲ್ಲೇಖಿಸಿರುವುದು. ಇದು ಅವರ ಶೈಕ್ಷಣಿಕ ಅರ್ಹತೆ, ವೃತ್ತಿಪರ ಹೊಣೆಗಾರಿಕೆ ಹಾಗೂ ತಾಂತ್ರಿಕ ಸ್ಥಾನಮಾನಕ್ಕೆ ಮಾಡಿದ ಸ್ಪಷ್ಟ ಅವಮಾನವಾಗಿದ್ದು, ಇದನ್ನು ಅಸೋಸಿಯೇಷನ್ ತೀವ್ರವಾಗಿ ಖಂಡಿಸುತ್ತದೆ. ಆದ್ದರಿಂದ “ಸೂಪರ್ವೈಸರ್” ಎಂಬ ಪದವನ್ನು ತಕ್ಷಣವೇ ತೆಗೆದುಹಾಕಿ, ಅದರ ಬದಲಿಗೆ “ಆಥರೈಸ್‌ಡ್ ಸಿವಿಲ್ ಇಂಜಿನಿಯರ್” ಎಂಬ ಸರಿಯಾದ ಹಾಗೂ ಗೌರವಯುತ ಪದನಾಮವನ್ನು ಬಳಸಬೇಕು ಎಂದು ಆಗ್ರಹಿಸಲಾಗಿದೆ.
ಯುಐಒಎಸ್ ತಂತ್ರಾಂಶದಲ್ಲಿ ಡಿಪ್ಲೋಮಾ ಸಿವಿಲ್ ಇಂಜಿನಿಯರ್‌ಗಳ ಕಾರ್ಯ ವ್ಯಾಪ್ತಿಯನ್ನು ಕೇವಲ 100 ಚದರ ಮೀಟರ್‌ಗಳಿಗೆ (100 Sq.m) ಸೀಮಿತಗೊಳಿಸಿರುವುದು ಸಂಪೂರ್ಣ ಅಸಮಂಜಸವಾಗಿದೆ. ಈ ಹಿಂದೆ ನಿರ್ಮಾಣ-2 (ಬಿಲ್ಡಿಂಗ್-2) ತಂತ್ರಾಂಶದಲ್ಲಿ ಡಿಪ್ಲೋಮಾ ಸಿವಿಲ್ ಇಂಜಿನಿಯರ್‌ಗಳಿಗೆ ನೀಡಲಾಗಿದ್ದ ಕಾರ್ಯ ವ್ಯಾಪ್ತಿಯೇ ಪ್ರಾಯೋಗಿಕ, ತಾಂತ್ರಿಕ ಹಾಗೂ ಕಾನೂನುಬದ್ಧವಾಗಿದ್ದು, ಅದೇ ಕಾರ್ಯ ವ್ಯಾಪ್ತಿಯನ್ನು ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಸಬೇಕು ಎಂದು ಅಸೋಸಿಯೇಷನ್ ಸ್ಪಷ್ಟವಾಗಿ ಒತ್ತಾಯಿಸಿದೆ.
ಈ ಎಲ್ಲಾ ವಿಚಾರಗಳಲ್ಲಿ ಸರ್ಕಾರ ಹಾಗೂ ನಗರಸಭಾ ಆಡಳಿತವು ತಕ್ಷಣ ಸ್ಪಷ್ಟ ಮತ್ತು ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳದಿದ್ದಲ್ಲಿ, ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು ಎಂದು ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.



