ವಿಜಯಸಾಕ್ಷಿ ಸುದ್ದಿ, ಗದಗ : ಕೇಂದ್ರ ಸರಕಾರ ನೀಡಿರುವ ಬರ ಪರಿಹಾರ ಹಣವನ್ನು ಎಲ್ಲ ರೈತರಿಗೂ ಸಮನಾಗಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ರೋಣ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಆರ್.ಎಸ್. ಪಾಟೀಲ, ರಾಜ್ಯದ ಪ್ರತಿಯೊಬ್ಬ ರೈತನೂ ಬರದಿಂದ ತತ್ತರಿಸಿದ್ದಾನೆ. ಬರ ಕಾರಣಕ್ಕೆ ಕೆಲ ರೈತರು ಬಿತ್ತನೆ ಮಾಡಿಲ್ಲ. ಹೀಗಾಗಿ ಅವರನ್ನು ಅನರ್ಹ ಎಂದು ಪರಿಗಣಿಸಲು ಸಾಧ್ಯವಿಲ್ಲ. ಬಿತ್ತನೆ ಮಾಡಲಿ, ಮಾಡದಿರಲಿ, ಜಮೀನು ಇರುವ ಪ್ರತಿಯೊಬ್ಬ ರೈತನಿಗೂ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿದರು.
ಇದು ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ ಅಲ್ಲ. ರಾಜ್ಯ ಸರಕಾರ ರೈತರ ಪರವಾಗಿಯೇ ಇದೆ. ರೈತರಿಗೆ ಬರ ಪರಿಹಾರ ಕೊಡಬೇಕು ಎನ್ನುವ ಕಾರಣಕ್ಕೆ ಸುಪ್ರಿಂಕೋರ್ಟ್ ಮೊರೆ ಹೋಗಿ ಕೇಂದ್ರದಿಂದ ಪರಿಹಾರ ಪಡೆದುಕೊಂಡಿದೆ. ಆ ಹಣ ಎಲ್ಲ ರೈತರಿಗೂ ಸಿಗಬೇಕು ಎನ್ನುವ ಉದ್ದೇಶದೊಂದಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ, ಜಿಲ್ಲೆಯ ಅರ್ಹ ರೈತರಿಗೆ ಬರ ಪರಿಹಾರ ಸಿಕ್ಕಿಲ್ಲ ಎನ್ನುವುದು ರೈತರ ಅಹವಾಲು. ಸದ್ಯ ಜಿಲ್ಲೆಯ 1.13 ಲಕ್ಷ ರೈತರಿಗೆ ಬರ ಪರಿಹಾರ ಸಿಕ್ಕಿದೆ. 22300 ರೈತರನ್ನು ಅನರ್ಹರು ಎಂದು ಗುರುತಿಸಿದ್ದಾರೆ. ಅ ಪೈಕಿ 9800 ರೈತರು ಜಮೀನು ಪಡಾ ಬಿಟ್ಟಿರುವ ಕಾರಣಕ್ಕೆ ಅಂಥವರನ್ನು ಅನರ್ಹಗೊಳಿಸಿದ್ದಾರೆ. ಈ ಪ್ರಮಾಣದ ರೈತರು ಜಮೀನು ಖಾಲಿ ಬಿಡಲು ಸಾಧ್ಯವಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದು, ಅರ್ಹ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.