ಜಿಲ್ಲೆಯ ಮಳೆ ಹಾನಿ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರ ಭೇಟಿ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ನವಲಗುಂದ, ಧಾರವಾಡ, ಅಣ್ಣಿಗೇರಿ, ಹುಬ್ಬಳ್ಳಿ, ಕುಂದಗೋಳ, ಕಲಘಟಗಿ ತಾಲೂಕುಗಳ ವ್ಯಾಪ್ತಿಯಲ್ಲಿ ಹೆಸರು, ಉದ್ದು, ಮೆಕ್ಕೆಜೋಳ, ಮೆಣಸಿನಕಾಯಿ ಹಾಗೂ ಈರುಳ್ಳಿ ಬೆಳೆಗಳಿಗೆ ಹಾನಿಯಾಗಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಬೆಳೆ ಹಾನಿ ಅಂದಾಜಿಸಿ 93,547 ಹೆಕ್ಟೆರ್ ಕೃಷಿ ಬೆಳೆಗಳು ಹಾಗೂ 4,065 ಹೆಕ್ಟೆರ್ ತೋಟಗಾರಿಕಾ ಬೆಳೆಗಳು ಸೇರಿ ಒಟ್ಟು 97,612 ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತಕ್ಕೆ ಪ್ರಾಥಮಿಕ ಸಮೀಕ್ಷಾ ವರದಿಯನ್ನು ಸಲ್ಲಿಸಿದ್ದು, ಶೀಘ್ರದಲ್ಲಿ ಸರ್ಕಾರಕ್ಕೆ ಈ ವರದಿ ಸಲ್ಲಿಸಿ, ಪರಿಹಾರ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

Advertisement

ಅವರು ಶನಿವಾರ ಬೆಳಿಗ್ಗೆ ನವಲಗುಂದ ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಆಗಿರುವ ಮನೆ ಹಾನಿ, ಬೆಳೆಹಾನಿ, ತಡಹಾಳ ಸೇತುವೆ ಹಾನಿ ಪರಿಶೀಲಿಸಿ, ಮಾತನಾಡಿದರು.

ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಉಪವಿಭಾಗಾಧಿಕಾರಿ, ತಹಸೀಲ್ದಾರರು, ಕೃಷಿ ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಕಳೆದ 4 ದಿನಗಳಿಂದ ಬೆಳಹಾನಿಯ ಸಮಿಕ್ಷೆಯನ್ನು ತಂಡಗಳನ್ನು ರಚಿಸಿಕೊಂಡು ತಾಲೂಕುವರು ಸಮೀಕ್ಷೆಯನ್ನು ನಡೆಸಿದ್ದಾರೆ. ಅಂದಾಜು 80 ಸಾವಿರದಿಂದ 1 ಲಕ್ಷ ಹೆಕ್ಟರ್ ಹೆಸರು ಬೆಳೆ ಹಾಳಾಗಿದೆ. ಬೆಳೆ ಹಾನಿ ಕುರಿತು ರೈತರಿಗೆ ಪರಿಹಾರಧನ ಬಿಡುಗಡೆ ಮಾಡಲು ಕೃಷಿ ಸಚಿವರಿಗೆ ವರದಿಯನ್ನು ಸಲ್ಲಿಸಿದ್ದೇವೆ. ಬೆಳೆ ಹಾನಿಯ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ತಲುಪಿಸಲಾಗಿದೆ ಎಂದು ಹೇಳಿದರು.

ಬೆಳೆ ವಿಮೆ ಎನ್ನುವುದು ರೈತರಿಗೆ ಒಂದು ಸುರಕ್ಷಾ ಕವಚವಿದ್ದಂತೆ. ಅನಿರೀಕ್ಷಿತ ಮಳೆಯಿಂದಾಗಿ, ಹವಾಮಾನ ವೈಪರೀತ್ಯಗಳಿಂದಾಗುವ ನಷ್ಟವನ್ನು ಇದು ಸರಿದೂಗಿಸುತ್ತದೆ. ಇನ್ನೂ ಹೆಚ್ಚಿನ ರೈತರು ಈ ಯೋಜನೆಯಡಿ ನೋಂದಾಯಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪ ವಿಭಾಗಾಧಿಕಾರಿ ಶಾಲಂ ಹುಸೇನ, ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಉಪ ನಿರ್ದೇಶಕ ಸಂದೀಪ, ನವಲಗುಂದ ತಹಸೀಲ್ದಾರ ಸುಧೀರ ಸಾಹುಕಾರ, ಅಣ್ಣಿಗೇರಿ ತಹಸೀಲ್ದಾರ ಎಂ.ಜಿ. ದಾಸಪ್ಪನವರ, ಜಿ.ಪಂ ಸಹಾಯಕ ಕಾರ್ಯದರ್ಶಿ ಅಜಯ ಎನ್, ತಾ.ಪಂ ಇಓ, ನವಲಗುಂದ ಪುರಸಭೆಯ ಮುಖ್ಯಾಧಿಕಾರಿ ಶರಣು ಪೂಜಾರ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ರೈತರು, ವಿವಿಧ ಮುಖಂಡರು, ಕೃಷಿಕ ಸಮಾಜದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ನವಲಗುಂದ ಶಾಸಕ ಎನ್.ಹೆಚ್. ಕೋನರೆಡ್ಡಿ ಮಾತನಾಡಿ, ಮುಂಗಾರು ಮಳೆ ಹೆಚ್ಚಾಗಿ ಸುರಿದಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಭೇಟಿ ನೀಡಿ ಸ್ಥಳ ಪರಿಶೀಲಿಸುತ್ತಿದ್ದಾರೆ. ಬೆಳೆ ಹಾನಿ ಆಗಿರುವುದಕ್ಕೆ ವಿಮಾ ಕಂಪನಿಯಿಂದ ಹೆಚ್ಚು ಪರಿಹಾರ ಕೊಡಿಸುವುದಕ್ಕೆ ಹಾಗೂ ಬೆಳೆ ಪರಿಹಾರಕ್ಕೆ ಸರಕಾರಕ್ಕೆ ವರದಿಯನ್ನು ಸಲ್ಲಿಸಲಾಗುತ್ತದೆ. ನವಲಗುಂದ-ನರಗುಂದ ನಡುವೆ ಇರುವ ಸೇತುವೆಯನ್ನು ಎರಡರಿಂದ ಮೂರು ಬಾರಿ ದುರಸ್ತಿ ಮಾಡಿಸಿದ್ದೇವೆ, ಆದರೂ ಅದು ನೀರಿನ ಮಟ್ಟ ಹೆಚ್ಚಾಗಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಅಂದಾಜು 70 ಕೋಟಿ ರೂ ಬೇಕಾಗುತ್ತದೆ. ಹೊಸ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಮಾಡಬೇಕೆಂಬ ಯೋಜನೆಯಿದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here