ಕೋಟ್ಪಾ ಕಾಯ್ದೆ ಇನ್ನಷ್ಟು ಪರಿಣಾಮಕಾರಿಯಾಗಲಿ:ವೈಶಾಲಿ ಎಂ.ಎಲ್

0
District Level Coordinating Committee Meeting of District Tobacco Prohibition Cell
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಕೋಟ್ಪಾ ಕಾಯ್ದೆಯು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಕೋಟ್ಪಾ ಕಾಯ್ದೆ ಉಲ್ಲಂಘನೆಯಾದಲ್ಲಿ ಅಂತಹ ಅಂಗಡಿಗಳ ಪರವಾನಿಗೆಯನ್ನು ರದ್ದುಗೊಳಿಸಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ತಂಬಾಕು ನಿಷೇಧ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋಟ್ಪಾ-2003 ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು, ಶಾಲಾ/ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳ ಆವರಣದಿಂದ 100 ಗಜದವರೆಗೆ ತಂಬಾಕು ಮಾರಾಟ ಮಾಡುವುದು, ಅಂಗಡಿಗಳ ವಿರುದ್ಧ ಕಠಿಣ ಕಾನೂನು ರೀತಿ ಕ್ರಮ ಕೈಗೊಂಡು ತಂಬಾಕು ಮಾರಾಟ ಮಾಡುವುದನ್ನು ನಿಷೇಧಿಸಬೇಕು. ಎಲ್ಲಾ ಅಂಗಡಿ ಮುಂಗಟ್ಟುಗಳ ಮುಂದೆ ಧೂಮಪಾನ ನಿಷೇಧ ಹಾಗೂ 18 ವರ್ಷದೊಳಗಿನವರಿಗೆ ತಂಬಾಕು ನಿಷೇಧ ಕುರಿತ ನಾಮಫಲಕ ಬಿತ್ತರಿಸಬೇಕು. ಅಂಗಡಿ ಮಾಲಿಕರ, ಸ್ಥಳದ ಮುಖ್ಯಸ್ಥರ ಜಾವಾಬ್ದಾರಿಯೂ ಆಗಿರುತ್ತದೆ.

ತಂಬಾಕು ಉತ್ಪನ್ನಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡುವುದು ಹಾಗೂ ಇತರೆ ಕೋಟ್ಪಾ ಕಾಯ್ದೆ ಉಲ್ಲಂಘನೆಯಾದಲ್ಲಿ ಅಂತಹ ಅಂಗಡಿಗಳ ಪರವಾನಿಗೆಯನ್ನು ರದ್ದುಗೊಳಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಎನ್.ಟಿ.ಸಿ.ಪಿ. ಕಾರ್ಯಕ್ರಮಾಧಿಕಾರಿ ಡಾ. ವೆಂಕಟೇಶ ರಾಥೋಡ್ ಮಾತನಾಡಿ, ಕೋಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಂಡು ಈವರೆಗೆ 52 ಕೋಟ್ಪಾ ದಾಳಿ ನಡೆಸಿ, 569 ಪ್ರಕರಣಗಳನ್ನು ದಾಖಲಿಸಿ ರೂ.90210 ದಂಡ ಸಂಗ್ರಹಿಸಲಾಗಿದೆ. ಕೋಟ್ಪಾ ಅನುಷ್ಠಾನ ಕುರಿತು ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರದ ಮೂಲಕ ಈ ವರ್ಷಒಟ್ಟು 1777ಅರ್ಥಿಗಳಿಗೆ ಆಪ್ತ ಸಮಾಲೋಚನೆ ಮಾಡಲಾಗಿದೆ.

ಸಮುದಾಯ ಮಟ್ಟದಲ್ಲಿ ಕೇಂದ್ರಕೃತ ಗುಂಪು ಚರ್ಚೆಯ ಮೂಲಕ ಒಟ್ಟು 48ಎಫ್.ಜಿ.ಡಿ. ಕಾರ್ಯಕ್ರಮ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.

District Level Coordinating Committee Meeting of District Tobacco Prohibition Cell

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ಭರತ್ ಎಸ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ.ಕೆ. ಭಜಂತ್ರಿ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಮೀನಾಕ್ಷಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಅರುಂಧತಿ ಕುಲಕರ್ಣಿ, ಜಿಲ್ಲಾ ಶಸ್ತç ಚಿಕಿತ್ಸಕ ಡಾ. ಬಿ.ಸಿ. ಕರಿಗೌಡ್ರ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ರಾಜೇಂದ್ರ ಬಸರಿಗೀಡದ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ, ತಾಲೂಕು ಆರೋಗ್ಯಾಧಿಕಾರಿಗಳು, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಗೋಪಾಲ ಸುರಪುರ, ಮತ್ತಿತರರು ಇದ್ದರು.

ಜಿಲ್ಲೆಯಲ್ಲಿ ಕಳೆದ ವರ್ಷ ಒಟ್ಟು 100 ಶಾಲಾ/ಕಾಲೇಜುಗಳಲ್ಲಿ ತಂಬಾಕು ವ್ಯಸನದಿಂದಾಗುವ ದುಷ್ಪರಿಣಾಮ ಹಾಗೂ ಕೋಟ್ಪಾ ಕಾಯ್ದೆ ಕುರಿತು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆರೋಗ್ಯ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲಾ/ಕಾಲೇಜುಗಳ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ತಂಬಾಕು ನಿಯಂತ್ರಣ ಸಮಿತಿ ರಚನೆ ಮಾಡಲಾಗಿದೆ. ಕೋಟ್ಪಾ ದಾಳಿ ಹಮ್ಮಿಕೊಳ್ಳುವುದರ ಮೂಲಕ ವ್ಯಾಪಾರಸ್ಥರು, ತಂಬಾಕು ಬಳಕೆದಾರರಿಗೆ ಹಾಗೂ ಸಾರ್ವಜನಿಕರಲ್ಲಿ ಕೋಟ್ಪಾ ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಡಾ. ವೆಂಕಟೇಶ ರಾಥೋಡ್ ಸಭೆಗೆ ವಿವರಿಸಿದರು.


Spread the love

LEAVE A REPLY

Please enter your comment!
Please enter your name here