ವಿಜಯಸಾಕ್ಷಿ ಸುದ್ದಿ, ಗದಗ : ಪ್ರಜೆಯೇ ನಿಜವಾದ ಪ್ರಭು. ಪ್ರಜೆಗಳ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವ ಕಾರ್ಯವಾಗಲಿ. ಅನವಶ್ಯಕ ಅಲೆದಾಟ ತಪ್ಪಿಸುವುದೇ ಜನತಾದರ್ಶನ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು.
ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ಒಂದು ನಿಮಿಷದ ಕೆಲಸ ಇದ್ದರೂ ಸಹ ತಿಂಗಳುಗಟ್ಟಲೇ ಅಲೆದಾಡಿಸುವುದು, ಜನರಿಗೆ ವಿನಾಕಾರಣ ನೋವು, ವಿಳಂಬ, ದ್ರೋಹ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರವೃತ್ತಿ ಸಂಪೂರ್ಣವಾಗಿ ನಿಲ್ಲಬೇಕು. ಜನರ ಸಮೀಪ ತೆರಳಿ ಅವರ ಸಮಸ್ಯೆಗಳನ್ನು ಈಡೇರಿಸುವ ಕೆಲಸವಾಗಬೇಕು ಎಂದರು.
ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮವನ್ನು ಕಳೆದ ವರ್ಷ ಸೆಪ್ಟೆಂಬರ್ 30ರಂದು ಮಾಡಲಾಗಿತ್ತು.
ಅಂದು ಸಾರ್ವಜನಿಕರು ಅನೇಕ ವಿಧದ ಅಹವಾಲುಗಳನ್ನು ಹೊತ್ತು ಆಗಮಿಸಿ ಒಟ್ಟು 920 ಅರ್ಜಿಗಳನ್ನು ಸಲ್ಲಿಸಿದ್ದರು. ಹಲವಾರು ಅಹವಾಲುಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. 830 ಅಹವಾಲುಗಳಿಗೆ ತಾರ್ಕಿಕ ಅಂತ್ಯ ನೀಡಲಾಗಿದೆ. ಬಾಕಿ ಉಳಿದ 83 ಅಹವಾಲುಗಳಲ್ಲಿ 40 ಅಹವಾಲುಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ.
ಉಳಿದ ಅಹವಾಲುಗಳು ವೈಯಕ್ತಿಕ ಹಾಗೂ ಅಪೂರ್ಣ ದಾಖಲೆಗಳನ್ನು ಒಳಗೊಂಡಿವೆ. ಮತ್ತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದರಿಮದ ಪರಿಹಾರ ಪ್ರಯತ್ನ ವಿಳಂಬವಾಗಿದೆ. ಅವುಗಳ ಪರಿಹಾರಕ್ಕೂ ಪ್ರಾಮಾಣಿಕ ಪ್ರಯತ್ನ ನಡೆದಿದೆ ಎಂದರು.
ಇಂದಿನ ಜನತಾದರ್ಶನ ಕಾರ್ಯಕ್ರಮದಲ್ಲಿ ಗದಗ ತಾಲೂಕು ಕಚೇರಿಯಲ್ಲಿ ಬಾಕಿ ಇರುವ ಅರ್ಜಿಗಳ ವಿಚಾರಣೆ ಕೈಗೊಳ್ಳುವ ಮೂಲಕ ಪರಿಹಾರಕ್ಕೆ ಯತ್ನಿಸಲಾಗುವುದು. ಜೊತೆಗೆ ಜಿಲ್ಲೆಯ ಇನ್ನೊಂದು ತಾಲೂಕು ಕಚೇರಿಯಲ್ಲಿ ಬಾಕಿ ಇರುವ ಅರ್ಜಿಗಳಿಗೂ ಸಹ ಈ ಕಾರ್ಯಕ್ರಮದಲ್ಲಿಯೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜನತಾದರ್ಶನ ಕಾರ್ಯಕ್ರಮದ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಜಿಲ್ಲೆಗಳಲ್ಲಿ ಜರುಗುವ ಜನತಾದರ್ಶನ ಕಾರ್ಯಕ್ರಮದಲ್ಲಿ ಸ್ವೀಕೃತಿಯಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವ ಮೂಲಕ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಉತ್ಸುಕರಾಗಿದ್ದಾರೆ ಎಂದು ನುಡಿದರು.
ಸರ್ಕಾರ ಜಾರಿಗೊಳಿಸಿದ ಪಂಚಗ್ಯಾರಂಟಿಗಳ ಅನುಷ್ಠಾನದಲ್ಲಿ ಗದಗ ಜಿಲ್ಲೆ ಮುಂಚೂಣಿಯಲ್ಲಿದೆ. ಶೇ 99.2ರಷ್ಟು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮೂಲಕ ಸಾಧನೆ ಮಾಡಲಾಗಿದೆ ಎಂದು ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ವೇದಿಕೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಓ ಭರತ್ ಎಸ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್ ಮೀನಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ ಇದ್ದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಅತಿಥಿಗಳನ್ನು ಸ್ವಾಗತಿಸಿದರು. ಉಪವಿಭಾಗಾಧಿಕಾರಿ ಗಂಗಪ್ಪ ಎಂ ವಂದಿಸಿದರು. ದತ್ತ ಪ್ರಸನ್ನ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.
ರಾಜ್ಯ ಖನಿಜ ನಿಗಮದ ಅಧ್ಯಕ್ಷರೂ ಆಗಿರುವ ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಜನತಾ ದರ್ಶನದ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ವೇದಿಕೆ ಇದಾಗಿದೆ. ವಿನಾಕಾರಣ ವಿಳಂಬ ಧೋರಣೆ ತಪ್ಪಿಸುವ ಮೂಲಕ ತುರ್ತಾಗಿ ಜನರ ಕಷ್ಟಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸುವುದಾಗಿದೆ. ಇದರ ಸಂಪೂರ್ಣ ಸದುಪಯೋಗವನ್ನು ಜಿಲ್ಲೆಯ ಜನತೆ ಪಡೆಯಬೇಕೆಂದರು.
ಇದು ಜಿಲ್ಲಾ ಮಟ್ಟದ ಎರಡನೇ ಜನತಾದರ್ಶನ ಕಾರ್ಯಕ್ರಮವಾಗಿದ್ದು, ಕಾರ್ಯಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಜನಸಾಮಾನ್ಯರಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿತ್ತು. ಗದಗ ತಾಲೂಕಿನ 44 ಅಹವಾಲು ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 116 ಅಹವಾಲುಗಳು ನೋಂದಣಿಯಾಗಿವೆ. ಅಲ್ಲದೇ ನೇರವಾಗಿಯೂ ಜನತಾದರ್ಶನ ಕಾರ್ಯಕ್ರಮಕ್ಕೆ ಆಗಮಿಸಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಹಿರಿಯ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಪ್ರಯತ್ನಿಸಲಿದ್ದಾರೆ.
– ಡಾ. ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.