ವಿಜಯಸಾಕ್ಷಿ ಸುದ್ದಿ, ಗದಗ : ಸ್ಪರ್ಧೆಯಲ್ಲಿ ಸೋಲು-ಗೆಲವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಹೆಚ್‌ಐವಿ ಏಡ್ಸ್ ಸಾಮಾನ್ಯ ಖಾಯಿಲೆಯಾಗಿದ್ದು, ಕೋವಿಡ್‌ನಷ್ಟು ಭಯಾನಕ ಇಲ್ಲ. ಹಾಗೂ ಔಷಧೋಪಚಾರದಿಂದ ಜೀವನಾವಧಿಯನ್ನು ಹೆಚ್ಚಿಗೆ ಮಾಡಬಹುದು ಎಂದು ಡಾ. ಅರುಂಧತಿ ಕುಲಕರ್ಣಿ ತಿಳಿಸಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಗದಗ, ಬಸವೇಶ್ವರ ಹಿರಿಯ ಪ್ರಾಥಮಿಕ-ಪ್ರೌಢಶಾಲೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಇವರುಗಳ ಆಶ್ರಯದಲ್ಲಿ ಗದಗ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
18 ವರ್ಷ ತುಂಬಿದವರು, ಹಿಮೋಗ್ಲೋಬಿನ್ ಪ್ರಮಾಣ 12.5 ಮಿ.ಗ್ರಾ ಇರುವವರು ಹಾಗೂ 45 ಕೆ.ಜಿ.ಗಿಂತ ಹೆಚ್ಚಿಗೆ ತೂಕ ಉಳ್ಳವರು ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಹೊಸ ರಕ್ತ ಉತ್ಪಾದನೆಯಾಗಲು ಪ್ರೇರಣೆ ಕೊಡುತ್ತದೆ. ಕ್ಯಾನ್ಸರ್ ಮತ್ತು ಹೃದಯದ ಖಾಯಿಲೆಯನ್ನು ತಡೆಗಟ್ಟಬಹುದು. ಹಾಗಾಗಿ ಪ್ರತಿಯೊಬ್ಬರೂ ಜೀವನದಲ್ಲಿ ಒಂದು ಬಾರಿಯಾದರೂ ರಕ್ತದಾನ ಮಾಡಿ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾ. ಎಸ್.ಆರ್. ಗಿಡ್ಡಕೆಂಚೆಣ್ಣವರ ಮಾತನಾಡಿ, ಸ್ಪರ್ಧಾಳುಗಳು ಸ್ಪೂರ್ತಿಯಿಂದ ಭಾಗವಹಿಸಿ ಕಾಲೇಜಿಗೆ ಕೀರ್ತಿ ತರಬೇಕು. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ವಿದ್ಯಾರ್ಥಿ ಜೀವನದಲ್ಲಿ ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಗುರಿ ಸಾಧಿಸಲು ತಿಳಿಸಿದರು.
ಬಸವರಾಜ ಲಾಲಗಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ರಸಪ್ರಶ್ನೆ ಸ್ಪರ್ಧೆಯ ನಿಯಮಗಳು ಹಾಗೂ ಉದ್ದೇಶಗಳನ್ನು ವಿವರಿಸಿ, ಯುವಜನರಲ್ಲಿ ರಕ್ತದಾನದ ಹಾಗೂ ಹೆಚ್‌ಐವಿ ಏಡ್ಸ್ ಬಗ್ಗೆ ಅರಿವು ಮೂಡಿಸುವುದು ಈ ರಸಪ್ರಶ್ನೆ ಸ್ಪರ್ಧೆಯ ಉದ್ದೇಶವಾಗಿದ್ದು, ಹೆಚ್‌ಐವಿ ಏಡ್ಸ್ ನಿಯಂತ್ರಣ ಸೇವೆ, ಸೌಲಭ್ಯ, ಕಳಂಕ ಮತ್ತು ತಾರತಮ್ಯ, ರಾಷ್ಟ್ರೀಯ ಸಹಾಯವಾಣಿ, ಹೆಚ್‌ಐವಿ ಏಡ್ಸ್ ಕಾಯ್ದೆ-2017 ಹಾಗೂ ರಕ್ತದಾನದ ಬಗ್ಗೆ ರಸಪ್ರಶ್ನೆ ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಮೌಲ್ಯಮಾಪಕರಾದ ವಿಷಯ ನೀರಿಕ್ಷಣಾಧಿಕಾರಿಗಳಾದ ಲಲಿತಾ ವಂಕ್ಯಾಳ, ಸರೋಜಾ ಬಂಡಿವಡ್ಡರ ಉಪಸ್ಥಿತರಿದ್ದರು. ಭಾಗ್ಯವತಿ ಪಾಟೀಲ ದಾಖಲಾತಿ ನಿರ್ವಹಿಸಿದರು. ಸ್ಪರ್ಧೆಯಲ್ಲಿ ಜಿಲ್ಲೆಯ 41 ಪ್ರೌಢಶಾಲೆಯ ತಂಡಗಳು ಭಾಗವಹಿಸಿದ್ದವು. ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮವನ್ನು ಬಸವರಾಜ ಲಾಲಗಟ್ಟಿ ನಿರ್ವಹಿಸಿದರು. ಸಮಾರಂಭದಲ್ಲಿ ಪ್ರೌಢಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸರೋಜಾ ಬಿ.ಪ್ರಾರ್ಥಿಸಿದರು. ಚೆನ್ನಮ್ಮಾ ಶ್ಯಾಡಲಗೇರಿ ವಂದಿಸಿದರು.
ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಹೊಳೆಮಣ್ಣೂರ ವಿದ್ಯಾರ್ಥಿನಿಯರಾದ ಭುವನೇಶ್ವರ ಆದಿ, ಸಂಗೀತಾ ಮುಳ್ಳೂರ- ಪ್ರಥಮ, ಸರಕಾರಿ ಆದರ್ಶ ವಿದ್ಯಾಲಯ ಇಟಗಿಯ ಸುನೀತಾ ಕುಸುಗಲ್, ಕಾರ್ತಿಕ ಹಿರೇವ್ಮಠ ದ್ವಿತೀಯ, ಪಾರ್ಶ್ವನಾಥ ಪ್ರೌಢಶಾಲೆಯ ಶ್ರೇಯಸ್, ವಿಕಾಸ- ತೃತೀಯ, ಹಾಗೂ ಸಮಾಧಾನಕರ ಬಹುಮಾನವನ್ನು ಸೇಂಟ್‌ಜಾನ್ ಪ್ರೌಢಶಾಲೆಯ ತೇಜಸ್ವಿನಿ, ಜೆಸ್ಸಿಕಾ ಪಡೆದುಕೊಂಡರು. ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಕ್ರಮವಾಗಿ 6 ಸಾವಿರ ರೂ, 5 ಸಾವಿರ ರೂ, 4 ಸಾವಿರ ರೂ, ಸಮಾಧಾನಕರ 3 ಸಾವಿರ ರೂ ವಿತರಿಸಲಾಯಿತು.