ಶಿಕ್ಷಕರು ಗಂಭೀರತೆಯಿಂದ ಕಾರ್ಯ ನಿರ್ವಹಿಸಿ : ಎಸ್.ವಿ. ಸಂಕನೂರು

0
District Level Teacher's Day Programme
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸಮಾಜದಲ್ಲಿ ಶಿಕ್ಷಕರನ್ನು ಸಾಕ್ಷಾತ್ ಬ್ರಹ್ಮನಂತೆ ಕಾಣುತ್ತಾರೆ. ಅದಕ್ಕೆ ಗೌರವ ತರುವಂತೆ ಎಲ್ಲ ಶಿಕ್ಷಕವೃಂದ ಶಿಕ್ಷಣ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಹೇಳಿದರು.

Advertisement

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಗದಗ ಗ್ರಾಮೀಣ ಮತ್ತು ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರುಗಳ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗದಗ ಜಿಲ್ಲೆ ಸೇರಿದಂತೆ ದೇಶಾದ್ಯಂತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಶಿಕ್ಷಕರ ದಿನಾಚರಣೆಗೆ ಕಾರಣೀಕರ್ತರಾದ ರಾಧಾಕೃಷ್ಣನ್ ಅವರು ತಮ್ಮ ಹುಟ್ಟುಹಬ್ಬದ ದಿನವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಲು ತಿಳಿಸಿದರು. ರಾಧಕೃಷ್ಣನ್ ಅವರು ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿ ತಮ್ಮ ಜೀವನವನ್ನು ಮಕ್ಕಳಿಗಾಗಿ ಸಮರ್ಪಿಸಿಕೊಂಡರು. ರಾಧಾಕೃಷ್ಣನ್ ಅವರಿಗೆ ವಿವಿಧ ದೇಶಗಳು ಡಾಕ್ಟರೇಟ್ ನೀಡಿ ಗೌರವವನ್ನು ಸಲ್ಲಿಸಿವೆ. ಅವರ ಆದರ್ಶ ಜೀವನ ಶೈಲಿಯನ್ನು ಇಂದಿನ ಶಿಕ್ಷಕರು ಅಳವಡಿಸಿಕೊಂಡು ಶಿಕ್ಷಕರು ತಮ್ಮ ವೃತ್ತಿಯಲ್ಲಿ ಸಾಧನೆ ಮಾಡಬೇಕು ಎಂದರು.

District Level Teacher's Day Programme

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಲ್. ಬಾರಟಕ್ಕೆ, ಸರ್ವರನ್ನು ಸ್ವಾಗತಿಸಿ ಮಾತನಾಡಿ, ಶಿಕ್ಷಕರು ಪ್ರಾರಂಭದಿಂದ ನಿವೃತ್ತಿವರೆಗೆ ಸದಾ ಕ್ರಿಯಾಶೀಲಾರಾಗಿ ಕೆಲಸ ಮಾಡಬೇಕು. ಮಗುವಿಗೆ ತಾಯಿಯ ಉಸಿರು ಮತ್ತು ತಂದೆಯಿಂದ ಹೆಸರು ಬರುತ್ತದೆ. ಶಿಕ್ಷಕರು ಮಗುವಿನ ಹೆಸರು-ಉಸಿರು ಶಾಶ್ವತವಾಗಿ ಇರುವಂತೆ ಮಾಡಿ ವಿದ್ಯಾರ್ಥಿಯ ಭವಿಷ್ಯ ನಿರ್ಮಿಸುವ ಶಿಲ್ಪಿಯಾಗಬೇಕು ಎಂದು ಹೇಳಿದರು.

ಉಪನ್ಯಾಸಕರಾಗಿ ಐ.ಬಿ. ಬೆನಕೊಪ್ಪ ಮಾತನಾಡಿ, ಶಿಕ್ಷಕರ ಬೇಡಿಕೆ, ಜವಾಬ್ದಾರಿ, ಸವಾಲುಗಳ ಕುರಿತು ಶಿಕ್ಷಕರ ದಿನಾಚರಣೆಯಲ್ಲಿ ಚರ್ಚೆ ಮಾಡಬೇಕು. ಸಾಕಷ್ಟು ಕತ್ತಲು ಆವರಿಸಿದ ಮನಸ್ಸಿನ್ನು ಬೆಳಕಿನೆಡೆಗೆ ಸಾಗಿಸಲು ಶಿಕ್ಷಕರು ಬೇಕು. ಹಾಗಾಗಿ ಶಿಕ್ಷಕರು ಹೃದಯ ಶ್ರೀಮಂತಿಕೆ ಹೊಂದಬೇಕು. ಮಾನಸಿಕ ಹಾಗೂ ಶಾರೀರಿಕವಾಗಿ ಸದೃಢತೆ ಹಾಗೂ ನೈತಿಕತೆ ಹೊಂದಿರಬೇಕು ಎಂದು ಶಿಕ್ಷಕ ವೃತ್ತಿಯ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ತಹಸೀಲ್ದಾರ ಶ್ರೀನಿವಾಸ ಕುಲಕರ್ಣಿ, ನೌಕರರ ಸಂಘದ ಅಧ್ಯಕ್ಷ ರವಿ ಗುಂಜಿಕರ, ಅಕ್ಷರ ದಾಸೋಹ ಅಧಿಕಾರಿ ಸರಸ್ವತಿ, ಎಸ್.ಎನ್. ಬಳ್ಳಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಸ್.ಬುರಡಿ, ವಿ.ವಿ. ನಡುವಿನಮನಿ, ಶಾಲಾ ಶಿಕ್ಷಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ವಿರೇಶ ವಾಲ್ಮಿಕಿ, ಬಿ.ಎಂ. ಎರಗುಡಿ ನಿರೂಪಿಸಿದರು.

ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಮಾತನಾಡಿ, ನಾನು ಕೂಡ ಶಿಕ್ಷಕ ವೃತ್ತಿಯಿಂದ ಬಂದಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಶಿಕ್ಷಕರು ಕೇವಲ ಶಾಲೆಗೆ ಸೀಮಿತವಾಗದೆ ತುರ್ತು ಪರಿಸ್ಥಿತಿಯಂತಹ ಕೋವಿಡ್ ವೇಳೆ, ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಸಮರ್ಥವಾಗಿ ಕಾರ್ಯನಿರ್ವಹಿಸಿದಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.

ದೇಶದ ಭವಿಷ್ಯ ನಾಲ್ಕು ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತದೆ. ಅದರಲ್ಲಿ ಕೆಲಸ ಮಾಡುವ ಶಿಕ್ಷಕರ ಜವಾಬ್ದಾರಿ ಗುರುತರವಾದದ್ದು. ಒಬ್ಬ ತಾಯಿ ಮಗುವಿಗೆ ಜನ್ಮ ನೀಡಿದರೆ ಆ ಮಗುವಿನ ಭವಿಷ್ಯದ ನಿರ್ಮಾಣ ಮಾಡುವವರು ಶಿಕ್ಷಕರು ಎಂದು ತಿಳಿದುಕೊಂಡು ಎಲ್ಲರೂ ಗಂಭೀರತೆಯಿಂದ ಕಾರ್ಯನಿರ್ವಹಿಸಬೇಕು.
– ಎಸ್.ವಿ. ಸಂಕನೂರು.
ವಿ.ಪ ಸದಸ್ಯರು.

 


Spread the love

LEAVE A REPLY

Please enter your comment!
Please enter your name here