ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಗದಗ, ಆಯುಷ್ ಮಂದಿರ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುರಿತು ಪೂರ್ವಭಾವಿ ಸಭೆ, ಯೋಗೋತ್ಸವ ಕಾರ್ಯಕ್ರಮ ಮತ್ತು ಆಯುಷ್ ಪರಿಚಯ ಕುರಿತು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗದಗ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಎಸ್.ಉಪ್ಪಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯದ ಹಾಗೂ ಜಿಮ್ಸ್ಸ್ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಜಿಲ್ಲಾ ಆಯುಷ್ ಇಲಾಖೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಇದೇ ರೀತಿ ಜೂನ್ 21ರಂದು ನಡೆಯುವ ಜಿಲ್ಲಾಮಟ್ಟದ ಯೋಗ ಶಿಬಿರದಲ್ಲಿ ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಆಯುರ್ವೇದದಿಂದ ಮತ್ತು ಯೋಗವು ನಮಗೆ ಮಾನಸಿಕ ಸ್ಥಿರತೆ ನೀಡಿ, ಯಾವುದೇ ಒತ್ತಡವನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ. ಯೋಗದಿಂದ ಆರೋಗ್ಯದ ಯೋಗ್ಯತೆ ಕಾಪಾಡಿಕೊಳ್ಳಬಹುದು.
ಮಾನವನ ಆಂತರಿಕ ಮತ್ತು ಬಾಹ್ಯ ಸೌಂದರ್ಯ ಯೋಗ ಅತ್ಯಂತ ಪರಿಣಾಮಕಾರಿಯಾಗಿದ್ದು, ಇದರಿಂದ ಸೌಂದರ್ಯ ವೃದ್ಧಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಅಶೋಕ ಮತ್ತಿಗಟ್ಟಿ, ಡಾ. ಸಾಯಿಪ್ರಕಾಶ, ಡಾ. ಕಮಲಾಕರ, ಡಾ. ಸಂಜೀವ ನಾರಪ್ಪನವರ ಸೇರಿದಂತೆ ಗ್ರಾಮೀಣ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಸವದಳದ ಚುಂಚಾ ಯೋಗ ತರಬೇತಿದಾರರಾಗಿ ಭಾಗವಹಿಸಿ ಯೋಗದ ಕೆಲವು ಆಸನಗಳನ್ನು ತಿಳಿಸಿದರು.



