ವಿಜಯಸಾಕ್ಷಿ ಸುದ್ದಿ, ಕೊಪ್ಪಳ : ಮಕ್ಕಳು ಕೇವಲ ಓದಿನ ದಾಸರಾಗದೇ ಪಠ್ಯೇತರ ಚಟುವಟಿಕೆಗಳನ್ನೂ ಅಳವಡಿಸಿಕೊಂಡರೆ ಸಾಧನೆಗೆ ಕಿರೀಟದಂತೆ ಇರುತ್ತದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಅಭಿಪ್ರಾಯಪಟ್ಟರು.
ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ನೆಹರು ಯುವ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇನ್ನಷ್ಟು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಈ ವರ್ಷದ ಅನುದಾನದಲ್ಲಿ ಹೆಚ್ಚಳ ಮಾಡಿಕೊಡಲಾಗುವದು. ಜಿಲ್ಲಾ ಕ್ರೀಡಾಂಗಣದಲ್ಲಿ ಇನ್ನಷ್ಟು ಹೊಸ ಹೊಸ ಅವಕಾಶಗಳನ್ನು ನೀಡುವ ನಿಟ್ಟಿನಲ್ಲಿ ಕೆಕೆಆರ್‌ಡಿಬಿಯಲ್ಲಿ ಸೇರಿಸಲಾಗಿದೆ. ಅದರಂತೆ ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ. ಎಸ್. ಬಾಲಾಜಿ ಮಾತನಾಡಿ, ಯುವಶಕ್ತಿ ಒಂದು ಹುಚ್ಚು ಪ್ರವಾಹವಿದ್ದಂತೆ. ಅದನ್ನು ಸರಿಯಾದ ದಿಕ್ಕಿನಲ್ಲಿ ಹರಿಸಿದರೆ ನಿಶ್ಚಿತವಾಗಿ ಸಾಧನೆ ಮತ್ತು ದೇಶದ ಪ್ರಗತಿಗೆ ಪೂರಕ ಶಕ್ತಿಯಾಗಬಲ್ಲದು. ಮೊದಲು ಇದ್ದ ಯುವಜನೋತ್ಸವದ ಉತ್ಸಾಹ ಈಗಿಲ್ಲ. ಆದ್ದರಿಂದ ನಾವೇ ವಿಶೇಷ ಕಾರ್ಯಕ್ರಮ ರೂಪಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರತಿಯೊಬ್ಬರೂ ಸಾಹಿತ್ಯ ಮತ್ತು ಕಲೆಯ ಅಭಿರುಚಿಗಳನ್ನು ಬೆಳೆಸಿಕೊಳ್ಳಬೇಕು. ಅದರ ಮೂಲಕ ಪ್ರಶ್ನಿಸುವ ಮನೋಭಾವ ಮತ್ತು ತಮಗೆ ಬೇಕಾದ ಸೌಕರ್ಯ ಪಡೆಯಲು ಮತ್ತು ಅನ್ಯಾಯಗಳ ವಿರುದ್ಧ ಪ್ರತಿಭಟಿಸಲು ಹೋರಾಟ ಮಾಡುವ ಮನೋಭಾವ ಇರಬೇಕು ಎಂದರು.
ಕರ್ನಾಟಕ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ.ಗೊಂಡಬಾಳ ಒಕ್ಕೂಟದ ಪರವಾಗಿ ಮನವಿ ಸಲ್ಲಿಸಿ, ರಾಜ್ಯ ಯುವ ಸಂಘಗಳ ಒಕ್ಕೂಟಕ್ಕೆ ಇಲಾಖೆಯಲ್ಲಿ ಕಛೇರಿ ತೆರೆಯಲು ಕೊಠಡಿ ಸೌಲಭ್ಯ, ಜನಪದ ತರಬೇತಿ ಶಿಬಿರಗಳನ್ನು ನಡೆಸಲು ಹಾಗೂ ಯುವ ಸಂಘಗಳನ್ನು ಪ್ರೋತ್ಸಾಹಿಸಲು ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್, ಜಾನಪದ ಅಕಾಡೆಮಿ ಸದಸ್ಯ ಜೀವನಸಾಬ್ ಬಿನ್ನಾಳ ಮಾತನಾಡಿದರು.
ಕರ್ನಾಟಕ ಸಂಭ್ರಮ 50ರ ರಾಜ್ಯ ಪ್ರಶಸ್ತಿ ಪಡೆದ ರುಕ್ಮಿಣಿಬಾಯಿ ಚಿತ್ರಗಾರ ಅವರನ್ನು ಸನ್ಮಾನಿಸಲಾಯಿತು. ನೆಹರು ಯುವ ಕೇಂದ್ರದ ಜಿಲ್ಲಾಧಿಕಾರಿ ಮೋಂಟು ಪತ್ತಾರ, ಯುವ ಪ್ರಶಸ್ತಿ ಪುರಸ್ಕೃತರಾದ ಅಕ್ಬರ್ ಸಿ.ಕಾಲಿಮಿರ್ಚಿ, ಜ್ಯೋತಿ ಎಂ.ಗೊಂಡಬಾಳ, ಶ್ರೀನಿವಾಸ ಕಂಟ್ಲಿ, ಹಿರಿಯ ಪತ್ರಕರ್ತ ಜಿ.ಎಸ್. ಗೋನಾಳ, ಜಾನಪದ ಅಕಾಡಮಿ ಸದಸ್ಯ ಮೆಹಬೂಬ ಕಿಲ್ಲೇದಾರ್, ತಾಲೂಕಾ ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ, ಕ್ರೀಡಾ ತರಬೇತುದಾರರಾದ ಯತಿರಾಜ್, ಸುರೇಶ ಯಾದವ, ದೀಪಾ ನಾಗ್ಲಿಕರ್, ವಿಶ್ವನಾಥ ಕರ್ಲಿ ಇತರರು ಇದ್ದರು.
ಮೆಹಬೂಬ ಕಿಲ್ಲೇದಾರ್ ಪ್ರಾರ್ಥಿಸಿದರು, ಮಂಜುನಾಥ ಜಿ.ಗೊಂಡಬಾಳ ಮತ್ತು ಶ್ವೇತಾ ರಂಜಪಲ್ಲಿ ಕಾರ್ಯಕ್ರಮ ನಿರ್ವಹಿಸಿದರು ಇಲಾಖೆ ಅಧೀಕ್ಷಕರಾದ ನಾಗರಾಜ್ ಹೆಚ್. ವಂದಿಸಿದರು.
ಜನಪದ ಗೀತೆ, ಜನಪದ ನೃತ್ಯ ವಯಕ್ತಿಕ ಮತ್ತು ಸಮೂಹ, ಕವಿತೆ ರಚನೆ, ಕಥಾ ರಚನೆ, ಘೋಷಣೆ, ಪೇಂಟಿಂಗ್ ಮತ್ತು ವಿಜ್ಞಾನ ಕ್ರಿಯಾತ್ಮಕ ಉಪಕರಣಗಳ ಸ್ಪರ್ಧೆಗಳು ಜರುಗಿದವು. ನಿರ್ಣಾಯಕರಾಗಿ ಡಾ.ಎಸ್. ಬಾಲಾಜಿ, ಅಕ್ಬರ್ ಕಾಲಿಮಿರ್ಚಿ, ಮಂಜುನಾಥ ಜಿ.ಗೊಂಡಬಾಳ, ಪ್ರಮೋದ ಕುಲಕರ್ಣಿ, ಜೀವನ್ ಸಾಬ್ ಬಿನ್ನಾಳ, ಮೆಹಬೂಬ ಕಿಲ್ಲೆದಾರ್, ಮಹಾಂತಯ್ಯ ಹಿರೇಮಠ, ಯಮನೂರಪ್ಪ ಬೂದಗುಂಪಾ, ಅಪರ್ಣ ಹೆಗಡೆ, ವಿಜಯಲಕ್ಷ್ಮೀ ಮಠದ, ಸಿರಾಜ್ ಬಿಸರಳ್ಳಿ, ಡಾ. ಗವಿಸಿದ್ದಪ್ಪ ಮುತ್ತಾಳ, ಅನ್ನಪೂರ್ಣ ಪದ್ಮಸಾಲಿ, ವೀರಯ್ಯ ಒಂಟಿಗೋಡಿಮಠ, ಬದರಿನಾತ ಪುರೋಹಿತ, ಮಹ್ಮದ್ ರಫೀಕ್ ಕಾರ್ಯನಿರ್ವಹಿಸಿದರು.