ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಭಾರತ ವೀರಶೈವ ಮಹಾಸಭಾದ ಕರ್ನಾಟಕ ರಾಜ್ಯ ಘಟಕದ ನೂತನ ಅಧ್ಯಕ್ಷ ಶಂಕರ ಬಿದರಿ ಹಾಗೂ ಉಪಾಧ್ಯಕ್ಷರೂ ಗದಗ ಜಿಲ್ಲಾ ಉಸ್ತುವಾರಿಗಳಾದ ಅಮರೇಗೌಡ ಬಯ್ಯಾಪೂರ ಅವರು ಫೆ. 9ರಂದು ಗದಗ ನಗರಕ್ಕೆ ಆಗಮಿಸಿ ಜಿಲ್ಲಾ ಘಟಕದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.
ಅವರು ನಗರದ ವೀರಶೈವ ಜನರಲ್ ಲೈಬ್ರರಿಯ ಆವರಣದಲ್ಲಿ ಜರುಗಿದ ಮಹಾಸಭಾದ ಜಿಲ್ಲಾ, ತಾಲೂಕಾ ಘಟಕಗಳ ಸರ್ವ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಫೆ.9ರಂದು ಮಧ್ಯಾಹ್ನ 1-30 ಗಂಟೆಗೆ ಗದಗ ನಗರಕ್ಕೆ ಆಗಮಿಸುವ ರಾಜ್ಯ ಅಧ್ಯಕ್ಷ-ಉಪಾಧ್ಯಕ್ಷರನ್ನು ಬರಮಾಡಿಕೊಳ್ಳಲಾಗುವದು. 2-30 ಗಂಟೆಗೆ ಗದಗ ಜಿಲ್ಲಾ ಮಹಾಸಭಾದ ನಿಯೋಜಿತ ಸಭಾಭವನಕ್ಕೆ (ಕಳಸಾಪೂರ ರಿಂಗ್ ರೋಡ್) ಭೇಟಿ ನೀಡುವರು.
ಮಧ್ಯಾಹ್ನ 3 ಗಂಟೆಗೆ ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಮಹಾಸಭಾದ ಆಜೀವ ಸದಸ್ಯತ್ವ ಅಭಿಯಾನಕ್ಕೆ ಶಂಕರ ಬಿದರಿ ಅವರು ಚಾಲನೆ ನೀಡಿ ಸಂಘಟನೆಯ ಬಲವರ್ಧನೆಗೆ ಮಾರ್ಗದರ್ಶನ ಮಾಡುವರು.
ಸಮಾರಂಭದ ಸಾನ್ನಿಧ್ಯವನ್ನು ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಪೂಜ್ಯ ಅಭಿನವ ಬೂದೀಶ್ವರ ಮಹಾಸ್ವಾಮಿಗಳು ವಹಿಸುವರು. ಸಮ್ಮುಖವನ್ನು ಅಬ್ಬಿಗೇರಿಯ ಯಲ್ಲಾಲಿಂಗೇಶ್ವರ ಮಠದ ಪೂಜ್ಯ ಬಸವರಾಜ ಬಸವರಡ್ಡೇರ ವಹಿಸುವರು. ಮುಖ್ಯ ಅತಿಥಿಗಳಾಗಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಅಮರೇಗೌಡ ಬಯ್ಯಾಪೂರ ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯ ಸಂಗನಗೌಡ (ಮಿಥುನ್) ಪಾಟೀಲ ಆಗಮಿಸುವರು. ಅತಿಥಿಗಳಾಗಿ ಗದಗ ಜಿಲ್ಲೆಯ ಎಲ್ಲ ತಾಲೂಕಿನ ಅಧ್ಯಕ್ಷರು ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ವಹಿಸುವರು ಎಂದರು.
ಸಭಾಭವನ ನಿರ್ಮಾಣ ಕಾರ್ಯ ತೀವ್ರಗೊಳಿಸುವ, ದಾನಿಗಳಿಂದ ದೇಣಿಗೆ ಸಂಗ್ರಹಿಸುವ, ಶಾಸಕರ, ಸಂಸದರ ಅನುದಾನ, ಮಹಾಸಭಾದಿಂದ ಆರ್ಥಿಕ ನೆರವು ಸೇರಿದಂತೆ ಗದಗ ಜಿಲ್ಲೆಯಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸಲು ಜಿಲ್ಲಾ, ತಾಲೂಕಾ ಪದಾಧಿಕಾರಿಗಳಿಂದ ಬಂದ ಸಲಹೆ-ಸೂಚನೆಗಳನ್ನು ಗಮನದಲ್ಲಿರಿಸಿಕೊಂಡು ಎಲ್ಲರೂ ಒಟ್ಟಾಗಿ ಸಮಾಜಮುಖಿಯಾಗಿ ಕಾರ್ಯ ಮಾಡುವದಾಗಿ ಸಭೆಯಲ್ಲಿ ಉಪಸ್ಥಿತರಿದ್ದವರು ಒಮ್ಮತದ ನಿರ್ಧಾರ ಕೈಗೊಂಡರು ಎಂದು ಶರಣಬಸಪ್ಪ ಗುಡಿಮನಿ ಹೇಳಿದರು.
ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯ ಸಂಗನಗೌಡ (ಮಿಥುನ್) ಪಾಟೀಲ ಸಭೆಯಲ್ಲಿ ಉಪಸ್ಥಿತರಿದ್ದು ಸಲಹೆ-ಸೂಚನೆ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ ಸ್ವಾಗತಿಸಿದರು. ಚನ್ನವೀರ ಹುಣಶೀಕಟ್ಟಿ ವಂದಿಸಿದರು.