ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ 122 ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಾತಿಯ ವಿಶೇಷ ಅಭಿಯಾನದ ಫಲವಾಗಿ 90 ಗ್ರಾ.ಪಂಗಳು ಶೇ. 100ರಷ್ಟು ಸಾಧನೆ ಮಾಡಿದ್ದು, ಪ್ರಸಕ್ತ ಶೇ. 100.61 ಸಾಧನೆ ಮಾಡಿ ರಾಜ್ಯದಲ್ಲಿ 7ನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿ.ಇ.ಒ ಭರತ್ ಎಸ್ ಹೇಳಿದರು.
ಈ ಕುರಿತು ಮಾಹಿತಿ ನೀಡಿ ಮಾತನಾಡಿದ ಅವರು, ಜಿಲ್ಲೆಗೆ ಸವಾಲಾಗಿದ್ದ ಗ್ರಾ.ಪಂ ತೆರಿಗೆ ಬಾಕಿ ವಸೂಲಾತಿ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಜಿಲ್ಲೆಯ 7 ತಾಲೂಕುಗಳಲ್ಲಿ ತೆರಿಗೆ ವಸೂಲಿಯಲ್ಲಿ ಶೇ. 100.61ರಷ್ಟು ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರಸಕ್ತ ಸಾಲಿನ ಗುರಿ 1387.54 ಲಕ್ಷ ಇದ್ದು, 1395.95 ಲಕ್ಷ ರೂ ತೆರಿಗೆ ಸಂಗ್ರಹವಾಗಿದೆ ಎಂದು ಹೇಳಿದರು.
ಹಲವಾರು ವರ್ಷಗಳಿಂದ ಗ್ರಾ.ಪಂ ತೆರಿಗೆ ವಸೂಲಾತಿ ಮಂದಗತಿಯಲ್ಲಿ ಸಾಗಿತ್ತು. ಇದನ್ನರಿತು ಜಿಲ್ಲೆಯಲ್ಲಿ ಹಮ್ಮಿಕೊಂಡ ವಿಶೇಷ ಅಭಿಯಾನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ವಿವಿಧ ಹಂತಗಳಲ್ಲಿ ನಡೆದ ವಿಶೇಷ ಅಭಿಯಾನದಲ್ಲಿ ತಾಲೂಕು ಪಂಚಾಯಿತಿ/ಗ್ರಾಮ ಪಂಚಾಯಿತಿ ಅಧಿಕಾರಿಗಳು/ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಜನರ ಮನವೊಲಿಸಿ ತೆರಿಗೆ ವಸೂಲಿ ಮಾಡಿದ್ದಾರೆ. ಇದರಿಂದಾಗಿ ಗ್ರಾಮ ಪಂಚಾಯಿತಿಗಳ ಆರ್ಥಿಕ ಬಲ ಹೆಚ್ಚಾದಂತಾಗಿದೆ ಎಂದರು.
ಜಿಲ್ಲಾ ಪಂಚಾಯಿತಿಯಿಂದ ತೆರಿಗೆ ವಸೂಲಿಗಾಗಿ `ತೆರಿಗೆ ಮಾಸಾಚರಣೆ’ ಹಮ್ಮಿಕೊಂಡು ಗ್ರಾ.ಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಮನೆ ಮನೆ ಭೇಟಿ ಮತ್ತು ಜಾಥಾ ಕಾರ್ಯಕ್ರಮ ಮೂಲಕ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿತ್ತು. ಅದರಂತೆ ಮನೆ ಮನೆಗೆ ತೆರಳಿ ಕರ ವಸೂಲಿ ಮಾಡಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ. ನಮ್ಮ ನಿರಿಕ್ಷೆ ಈಗ ಸಾಕಾರವಾಗಿದೆ. ಇದಕ್ಕೆ ಕಾರಣರಾದ ಸಾರ್ವಜನಿಕರಿಗೂ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಶೇ.100ರಷ್ಟು ಸಾಧನೆ ಮಾಡಿದ ತಾಲೂಕು ಪಂಚಾಯತಿಗಳು: ಮುಂಡರಗಿ ಶೇ. 105.28, ನರಗುಂದ ಶೇ. 100.86, ರೋಣ ಶೇ. 104.86, ಶಿರಹಟ್ಟಿ ಶೇ. 102.47, ಗಜೇಂದ್ರಗಡ ಶೇ. 100.60, ಲಕ್ಷ್ಮೇಶ್ವರ ಶೇ. 105.28 ಹಾಗೂ ಗದಗ ತಾಲೂಕು ಶೇ. 94.81ರಷ್ಟು ಪ್ರಗತಿ ಸಾಧಿಸಿದೆ. ಒಟ್ಟಾರೆ ಜಿಲ್ಲೆಯಲ್ಲಿನ 90 ಗ್ರಾಮ ಪಂಚಾಯಿತಿಗಳು ಪ್ರಸ್ತುತ ವರ್ಷದ ಬೇಡಿಕೆಗೂ ಮೀರಿ ಸಾಧನೆ ಮಾಡಿವೆ.