ವಿಜಯಸಾಕ್ಷಿ ಸುದ್ದಿ, ರೋಣ: 1970ರಲ್ಲಿ ಬೆಂಗಳೂರಿನ ಜನಸಂಖ್ಯೆ 26 ಲಕ್ಷ ಮಾತ್ರ. ಆದರೆ, 2025ರಷ್ಟರಲ್ಲಿ 1 ಕೋಟಿ 40 ಲಕ್ಷ ಜನರು ಬ್ರ್ಯಾಂಡ್ ಬೆಂಗಳೂರಿನಲ್ಲಿ ವಾಸವಾಗಿದ್ದು, ಅಭಿವೃದ್ಧಿ ಮತ್ತು ಜನರಿಗೆ ಸರಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಐದು ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ರಾಜ್ಯ ಸರಕಾರದ ವಿಶ್ರಾಂತ ಮುಖ್ಯ ಕಾರ್ಯದರ್ಶಿಗಳು, ಬೆಂಗಳೂರು ಕ್ಷೇತ್ರ ವಿಂಗಡನೆ ಸಮಿತಿ ಅಧ್ಯಕ್ಷರು, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಬಿ.ಎಸ್. ಪಾಟೀಲ ಹೇಳಿದರು.
ಅವರು ಶನಿವಾರ ಆರ್‌ಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಿದ ಮಾತೋಶ್ರೀ ಬಸಮ್ಮ ಎಸ್ ಪಾಟೀಲರ 21ನೇ ಪುಣ್ಯಸ್ಮರಣೆ ನಿಮಿತ್ತ ಸ್ಮರಣೋತ್ಸವ ಸಮಿತಿಯವರು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬೃಹತ್ ಬೆಂಗಳೂರನ್ನು ಅಭಿವೃದ್ಧಿಯ ದೃಷ್ಟಿಯಿಂದ ವಿಂಗಡನೆ ಮಾಡಲಾಗಿದೆಯೇ ಹೊರತು ಬೇರಾವುದೇ ಉದ್ದೇಶವಿಲ್ಲ. ವಿಂಗಡನೆಗೂ ಮೊದಲು ಬಿಬಿಎಂಪಿಗೆ ಬರುತ್ತಿದ್ದ ತೆರಿಗೆ ರೂಪದ ಹಣ ಕೆವಲ 330 ಕೋಟಿ ಮಾತ್ರ. ವಿಪರ್ಯಾಸವೆಂದರೆ, ವಿಂಗಡನೆಯಾದ ಮೆಲೆ ಬರುವ ಆದಾಯ ಅಂದಾಜು 8 ಸಾವಿರ ಕೋಟಿ ದಾಟಲಿದ್ದು, ಇದರಿಂದ ನಗರವಾಸಿಗಳ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಬೆಂಗಳೂರನ್ನು ಜನರು ಇಚ್ಛಿಸಿದಂತೆಯೇ ಅಭಿವೃದ್ಧಿಪಡಿಸಬಹುದು ಎಂದರು.
ಈ ಮೊದಲು ಗ್ರಾಮೀಣ ಭಾಗಗಳಲ್ಲಿ ಶೇ. 72ರಷ್ಟು ಜನರು ವಾಸಿಸುತ್ತಿದ್ದರು. ಬದಲಾದ ಕಾಲದಲ್ಲಿ ಶೇ. 40ರಷ್ಟು ಗ್ರಾಮೀಣ ಭಾಗಗಳಲ್ಲಿ, ಶೇ. 60ರಷ್ಟು ಜನರು ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವುದು ಕಂಡುಬರುತ್ತಿದೆ. ಬೃಹತ್ ಬೆಂಗಳೂರು ವಿಂಗಡನೆ ಸಮಿತಿಯಲ್ಲಿ ಉನ್ನತ ಅಧಿಕಾರಿಗಳಿದ್ದು, ಅವರ ಸಹಯೋಗದಲ್ಲಿ ವಾಸ ಮಾಡುವ ಜನರಿಗೆ ತೊಂದರಯಾಗದಂತೆ ವರದಿ ತಯಾರಿಸಿ ಸರಕಾರಕ್ಕೆ ನೀಡಲಾಗಿದೆ. ಅದೇ ಮಾದರಿಯಲ್ಲಿ ಸರಕಾರ ಚುನಾವಣೆಯನ್ನೂ ನಡೆಸಲಿದೆ ಎಂದರು.
ಹಾಲಕೇರಿ ಅನ್ನದಾನ ಶ್ರೀಗಳು, ಕುದರಿಮೋತಿ ಶ್ರೀಮಠದ ವಿಜಯಮಹಾಂತ ಶ್ರೀಗಳು, ರೋಣದ ಗುರುಪಾದ ಶ್ರೀಗಳು, ಮಾಗಡಿ ಮಠದ ಶಿವಮೂರ್ತಿ ಶ್ರೀಗಳು, ಶಾಖಾ ಶಿವಯೋಗ ಮಂದಿರದ ಸಿದ್ದರಾಮ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ಶಾಸಕರಾದ ಜಿ.ಎಸ್. ಪಾಟೀಲ, ಎನ್.ಎಚ್. ಕೋನರೆಡ್ಡಿ, ಐ.ಎಸ್. ಪಾಟೀಲ, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಮಾಜಿ ಸಂಸದರಾದ ಆರ್.ಎಸ್. ಪಾಟೀಲ, ಮಂಜುನಾಥ ಕುನ್ನೂರ, ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಅರಣ್ಯ ನಿಗಮದ ಮಾಜಿ ಅಧ್ಯಕ್ಷ ಟಿ.ಈಶ್ವರ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಮಾತೋಶ್ರೀ ಬಸಮ್ಮ ಎಸ್.ಪಾಟೀಲರ ಪುಣ್ಯಸ್ಮರಣೆ ನಿಮಿತ್ತ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಬಡವರಿಗೆ ಸಹಾಯಹಸ್ತ ಚಾಚುತ್ತಿರುವುದು ಸ್ವಾಗತಾರ್ಹ. ಸತತ 21 ವರ್ಷಗಳಿಂದ ಹಮ್ಮಿಕೊಂಡ ಉಚಿತ ನೇತ್ರ ತಪಾಸಣೆ ಕಾರ್ಯದಿಂದ 3 ಸಾವಿರಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಿದೆ.
– ಎನ್.ಎಚ್. ಕೋನರೆಡ್ಡಿ.
ಶಾಸಕರು, ನವಲಗುಂದ.