ಬೆಂಗಳೂರು: ವಿಚ್ಛೇದಿತ ಮಹಿಳೆಯನ್ನು ಬಣ್ಣದ ಮಾತುಗಳಿಂದ ನಂಬಿಸಿ ಬಾಳು ಕೊಡೋದಾಗಿ ಮದುವೆಯಾಗಿದ್ದ ಮೋಹನ್ ರಾಜ್ ಎಂಬಾತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಚಿನ್ನಾಭರಣ ಸೇರಿ ಒಟ್ಟು 36 ಲಕ್ಷ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಂತ್ರಸ್ತೆಯ ದೂರಿನ ಪ್ರಕಾರ, ಮೋಹನ್ ರಾಜ್ ಮಹಿಳೆಗೆ ಮದುವೆ ಭರವಸೆ ನೀಡಿ ಸಂಸಾರ ನಡೆಸಿದ್ದ. ದಂಪತಿಗೆ ಒಂದು ಹೆಣ್ಣು ಮಗು ಕೂಡ ಜನಿಸಿತ್ತು. ಬಳಿಕ “ಹೊಸ ಮನೆ ಕಟ್ಟಿ ಹೊಸ ಜೀವನ ಶುರು ಮಾಡೋಣ” ಎಂದು ನಂಬಿಸಿ ಮಹಿಳೆಯಿಂದ ಹಣ ಪಡೆದು, ಚಿನ್ನಾಭರಣ ಸೇರಿ ಸುಮಾರು 36 ಲಕ್ಷ ರೂ. ವಂಚನೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದೀಗ ನ್ಯಾಯಕ್ಕಾಗಿ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮೋಹನ್ ರಾಜ್ ಹಾಗೂ ಮಹಿಳೆ ಬನಶಂಕರಿಯ ಒಂದೇ ಪ್ರದೇಶದವರು. ಮಹಿಳೆಯ ವಿಚ್ಛೇದನ ವಿಚಾರ ಸಂಪೂರ್ಣವಾಗಿ ತಿಳಿದಿದ್ದರೂ, ಹಲವು ವರ್ಷಗಳ ಪರಿಚಯದ ಬಳಿಕ ಮದುವೆಯಾಗುವುದಾಗಿ ಭರವಸೆ ನೀಡಿ 2022ರಲ್ಲಿ ವಿವಾಹವಾಗಿದ್ದಾನೆ. ಆದರೆ ಬಳಿಕ ವರ್ತನೆ ಬದಲಿಸಿಕೊಂಡು ಮಹಿಳೆಯನ್ನು ಸಂಕಷ್ಟಕ್ಕೆ ದೂಡಿದ್ದಾನೆ ಎಂದು ಆರೋಪಿಸಲಾಗಿದೆ.
ಮೋಹನ್ ರಾಜ್ ಮತ್ತು ಮಹಿಳೆ ಕಳೆದ 10 ವರ್ಷಗಳಿಂದ ಪರಿಚಿತರಾಗಿದ್ದು, 2023ರಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. 2025ರಲ್ಲಿ ಏಕಾಏಕಿ ಮನೆ ಬಿಟ್ಟು ಹೋದ ಮೋಹನ್ ರಾಜ್ ಬಳಿಕ ನಾಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಇದೀಗ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಹನ್ ರಾಜ್ ಬೇರೆ ಬೇರೆ ಯುವತಿಯರೊಂದಿಗೆ ಸಂಬಂಧ ಹೊಂದಿದ್ದ ಹಾಗೂ ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದಾನೆ ಎಂಬ ಆರೋಪವನ್ನೂ ಮಹಿಳೆ ಮಾಡಿದ್ದಾರೆ. ಈ ಕುರಿತು ನಾಲ್ಕು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ನ್ಯಾಯ ಸಿಕ್ಕಿಲ್ಲ. ದೂರು ನೀಡಲು ಒತ್ತಾಯಿಸಿದರೆ “ನಿನ್ನನ್ನೇ ಒಳಗೆ ಹಾಕ್ತೀವಿ” ಎಂದು ಪೊಲೀಸರು ಹೆದರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



