ವಿಜಯಸಾಕ್ಷಿ ಸುದ್ದಿ, ಗದಗ : ವ್ಯಕ್ತಿಯೊಬ್ಬರ ಅವಸರದ, ಅರ್ಥಹೀನ ನಿರ್ಧಾರಕ್ಕೆ ಆ ಕುಟುಂಬವಷ್ಟೇ ಅಲ್ಲದೆ, ಇಡೀ ಊರು ಮಮ್ಮಲ ಮರುಗುವಂತಾಗಿದೆ. ಅಜ್ಜನ ಮನೆಯಲ್ಲಿ ಖುಷಿಯಾಗಿ ದೀಪಾವಳಿ ಹಬ್ಬ ಆಚರಿಸಿದ್ದ ಅಮಾಯಕ ಪುಟ್ಟ ಮಕ್ಕಳು ತಂದೆಯ ಮೂರ್ಖತನಕ್ಕೆ ಬಲಿಯಾಗಿರುವ ಘಟನೆ ಎಂತಹ ಕಲ್ಲು ಹೃದಯವನ್ನೂ ಕರಗಿಸದಿರದು.
ತವರು ಮನೆಗೆ ಹೋದ ಪತ್ನಿ ಕೆಲ ದಿನಗಳ ತರುವಾಯ ಮನೆಗೆ ಬರುತ್ತೇನೆ ಎಂದಿದ್ದಕ್ಕೆ ಸಿಟ್ಟಾದ ಪತಿರಾಯ ತನ್ನ ಎರಡು ಹಾಗೂ ಸಂಬಂಧಿಕರ ಒಂದು ಹೀಗೆ ಮೂವರು ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆಗೆ ಮುಂಡರಗಿ ತಾಲೂಕಿನ ಮುಕ್ತುಂಪುರ ಗ್ರಾಮ ಇನ್ನಿಲ್ಲದಷ್ಟು ಶೋಕಪಡುತ್ತಿದೆ.
ನಡೆದಿದ್ದೇನು?
ಮಕ್ತುಂಪೂರ ಗ್ರಾಮದ ಮಂಜುನಾಥ ಅರಕೇರಿಗೆ (40 ವರ್ಷ) ನಾಲ್ಕು ಮಕ್ಕಳ ಮುದ್ದಾದ ಸಂಸಾರ ಇತ್ತು. ಕೆಲ ದಿನಗಳಿಂದ ಸಂಸಾರದ ತಾಳ ತಪ್ಪಿ, ದಂಪತಿಗಳ ನಡುವೆ ಸಣ್ಣ-ಪುಟ್ಟ ಕೌಟುಂಬಿಕ ಕಲಹ ಶುರುವಾಗಿತ್ತು. ದೀಪಾವಳಿ ಹಬ್ಬಕ್ಕೆಂದು ಮಂಜುನಾಥನ ಪತ್ನಿ ಪಾರವ್ವ ಅದೇ ಗ್ರಾಮದಲ್ಲಿರುವ ತನ್ನ ತವರುಮನೆಗೆ ಹೋಗಿದ್ದಾಳೆ. ಹಬ್ಬ ಮುಗಿದ ಬಳಿಕ ಪತ್ನಿ ಪಾರವ್ವ ಗಂಡನ ಮನೆಗೆ ಹಿಂದಿರುಗಿರಲಿಲ್ಲ.
ನವೆಂಬರ್ 13ರಂದು ದೊಡ್ಡಪ್ಪನ ಮನೆಯಲ್ಲಿ ಗೃಹ ಪ್ರವೇಶವಿದ್ದು, ಕಾರ್ಯಕ್ರಮ ಮುಗಿಸಿ ಬರುವುದಾಗಿ ಹೇಳಿದ್ದಾಳೆ.
ಕುಡಿತದ ದಾಸನಾಗಿದ್ದ ಮಂಜುನಾಥ ಇದೇ ವಿಷಯಕ್ಕೆ ಕೋಪಗೊಂಡಿದ್ದಾನೆ. ಸಿಟ್ಟಿನಲ್ಲಿ ದುಡುಕಿನ ನಿರ್ಧಾರ ತಾಳಿ, ಶಾಲೆಗೆ ಹೋಗಿದ್ದ ತನ್ನ ಇಬ್ಬರು ಮಕ್ಕಳಾದ ಪವನ ಹಾಗೂ ಧನ್ಯಾ ಜೊತೆಗೇ ಪತ್ನಿಯ ಸಹೋದರನ ಮಗ ವೇದಾಂತ್ ಇವರನ್ನು ಬೈಕ್‌ನಲ್ಲಿ ಕರೆತಂದು ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ತುಂಗಭದ್ರಾ ನದಿ ಸೇತುವೆಯ ಬಳಿ ಬಂದು ಮಕ್ಕಳನ್ನು ತುಂಬಿ ಹರಿಯುತ್ತಿರುವ ನದಿಗೆ ತಳ್ಳಿ, ತಾನೂ ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬುಧವಾರ ಸಂಜೆಯ ವೇಳೆ ಶೋಧಕಾರ್ಯದಲ್ಲಿ ಪತ್ನಿಯ ಸಹೋದರನ ಮಗ ವೇದಾಂತ್‌ನ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾನವೀಯತೆಯ ಆಧಾರದಲ್ಲಿ ಮೀನುಗಾರರು ಬುಧವಾರ ಬೆಳಿಗ್ಗೆ 6 ಗಂಟೆಯಿಂದಲೇ ನದಿಯಲ್ಲಿ ಶೋಧ ನಡೆಸಿದ್ದಾರೆ. ತಾಲೂಕಾಡಳಿತದ ತಂಡ ಮಧ್ಯಾಹ್ನ 12 ಗಂಟೆ ಬಳಿಕ ಎರಡು ಬೋಟ್‌ಗಳ ಮೂಲಕ ಶೋಧಕಾರ್ಯ ಆರಂಭಿಸಿತು. ಘಟನೆ ನಡೆದು 18 ಗಂಟೆಗಳ ಬಳಿಕ ಶೋಧ ಕಾರ್ಯ ಪ್ರಾರಂಭಿಸಿದ್ದು ಕುಟುಂಬಸ್ಥರು, ಗ್ರಾಮಸ್ಥರ ಆಕ್ರೋಶಕ್ಕೂ ಕಾರಣವಾಯಿತು.