ಡಿಜೆ ನಮ್ಮ ಸಂಸ್ಕೃತಿ-ಸಂಪ್ರದಾಯವಲ್ಲ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ  

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಬ್ಬಗಳ ಆಚರಣೆ ದಾರಿತಪ್ಪದಂತೆ, ಸಂಪ್ರದಾಯದಂತೆ, ಅರ್ಥಪೂರ್ಣವಾಗಿ ಆಚರಿಸಬೇಕು. ಹಬ್ಬಗಳ ಆಚರಣೆ ನೆಪದಲ್ಲಿ ಶಾಂತಿ, ಸುವ್ಯವಸ್ಥೆ, ಕೋಮು ಭಾವನೆ ಕೆರಳಿಸುವ ಮೂಲಕ ಸಮಾಜದ ಸ್ವಾಸ್ಥ್ಯಾ ಹಾಳು ಮಾಡುವವರ ಮೇಲೆ ಪೊಲೀಸ್ ಇಲಾಖೆಯಿಂದ ಹದ್ದಿನ ಕಣ್ಣಿಟ್ಟು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಹೇಳಿದರು.

Advertisement

ಅವರು ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಭಾನುವಾರ ಗಣೇಶೋತ್ಸವ ಹಾಗೂ ಈದ್‌ಮಿಲಾದ್ ಹಬ್ಬದ ಪ್ರಯುಕ್ತ ಕರೆಯಲಾಗಿದ್ದ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಹಬ್ಬದ ಆಚರಣೆ ವೇಳೆ ಇಸ್ಪೀಟ್ ಆಡುವುದು, ಅಕ್ರಮ ಮದ್ಯ ಮಾರಾಟ, ಪಿಓಪಿ ಗಣೇಶ ನಿಷೇಧ, ರಾತ್ರಿಯಿಡೀ ಜನರಿಗೆ ತೊಂದರೆಯಾಗುವಂತೆ ವರ್ತಿಸುವುದರ ಮೇಲೆ ಸಂಪೂರ್ಣ ನಿಗಾ ಇಡಲಾಗುವುದು. ಹಬ್ಬ ಶಾಂತಿಯುತವಾಗಿ ನಡೆಯುವಲ್ಲಿ ಗಣೇಶ ಮಂಡಳಿ, ಈ ಪ್ರದೇಶದ ಹಿರಿಯರು, ಜನಪ್ರತಿನಿಧಿಗಳ ಜವಾಬ್ದಾರಿ ಮುಖ್ಯವಾಗಿದೆ. ಮಂಡಳಿಯವರು ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಿ. ಪೊಲೀಸ್ ಇಲಾಖೆಯಿಂದಲೂ ಸೂಕ್ಷ್ಮ /ಅತಿ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಹಬ್ಬದ ಆಚರಣೆ ಮುಗಿಯುವವರೆಗೂ ಡ್ರೋನ್ ಕ್ಯಾಮರಾಗಳು ಕಾರ್ಯ ನಿರ್ವಹಿಸುತ್ತವೆ. ಪ್ರತಿಯೊಬ್ಬರ ಚಲನ-ವಲನ, ಚಹರೆ ಚಿತ್ರೀಕರಣವಾಗುತ್ತದೆ. ಅಹಿತರಕ ಘಟನೆಗೆ ಕಾರಣರಾದರೆ ಪೊಲೀಸ್ ಕೇಸ್‌ನಿಂದ ಮುಕ್ತರಾಗಲು ಜೀವನದುದ್ದಕ್ಕೂ ಕೋರ್ಟ್ಗೆ ಅಲೆಯಬೇಕಾಗುತ್ತದೆ ಎಂದು ಸೂಚ್ಯವಾಗಿ ತಿಳಿಸಿದರು.

ಡಿಜೆ ಬಳಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದು, ಕೋರ್ಟ್ ಆದೇಶಕ್ಕೆ ಎಲ್ಲರೂ ಬದ್ಧರಾಗಬೇಕು. ಭೂಮಿಯನ್ನೇ ನಡುಗಿಸುವ ಡಿಜೆ ಅಬ್ಬರದ ಸೌಂಡ್ ಬಳಕೆ ನಿಮ್ಮನ್ನು ಸೇರಿ ಹಸುಗೂಸುಗಳು, ಗರ್ಭಿಣಿಯರು, ಪುಟಾಣಿ ಮಕ್ಕಳು, ಹಿರಿಯರು, ಆರೋಗ್ಯ ಸಮಸ್ಯೆ ಇರುವವರು ಸೇರಿ ಎಲ್ಲರಿಗೂ ಸಮಸ್ಯೆಯಾಗುತ್ತದೆ. ಮೆರವಣಿಗೆಗೆ ಲಕ್ಷಾಂತರ ರೂ ಖರ್ಚು ಮಾಡಿದರೂ ಎಲ್ಲರೂ ನಿಮಗೆ ಹಿಡಿಶಾಪ ಹಾಕುತ್ತಾರೆ. ಡಿಜೆ ನಮ್ಮ ಸಂಸ್ಕೃತಿ-ಸಂಪ್ರದಾಯವಲ್ಲ. ಇದರಿಂದ ಯಾವ ಸಾಧನೆಯೂ ಆಗದು. ಬದಲಾಗಿ ಸಾಂಪ್ರದಾಯಿಕವಾಗಿ ಎಲ್ಲರೂ ಒಗ್ಗಟ್ಟಿನಿಂದ ಹಾಡಿ. ಕುಣಿದು ಶಾಂತಿ, ನೆಮ್ಮದಿ, ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಗಣೇಶ ವಿಸರ್ಜನೆ ಮಾಡಬೇಕು. ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ರೂಪಿಸಿರುವ ನಿಯಮಗಳನ್ನು ಪಾಲಿಸುವದು ಅಗತ್ಯವಾಗಿದ್ದು, ಎಲ್ಲರೂ ಸಹಕಾರದಿಂದ ಹಬ್ಬ ಆಚರಣೆ ಮಾಡೋಣ ಎಂದರು.

ಡಿವೈಎಸ್‌ಪಿ ಮೂರ್ತುಜಾ ಖಾದ್ರಿ, ಸಿಪಿಐ ನಾಗರಾಜ ಮಾಡಳ್ಳಿ ಮಾತನಾಡಿ, ಹಬ್ಬವನ್ನು ಶಾಂತಿ, ಸಹೋದರ ಭಾವನೆಯೊಂದಿಗೆ ಆಚರಿಸಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದರು.

ಪಿ.ಬಿ. ಖರಾಟೆ, ಚಂಬಣ್ಣ ಬಾಳಿಕಾಯಿ, ಸೊಮೇಶ ಉಪನಾಳ, ಜಯಕ್ಕ ಕಳ್ಳಿ, ಕರೀಂಖಾನ ಕರಿಂಖಾನವರ, ಎಸ್.ಕೆ. ಹವಾಲ್ದಾರ, ತಿಪ್ಪಣ್ಣ ಸಂಶಿ, ಮಂಜುನಾಥ ಮಾಗಡಿ, ಗಂಗಾಧರ ಮೆಣಸಿನಕಾಯಿ, ಬಸವರಾಜ ಹೊಗೆಸೊಪ್ಪಿನ, ಫಕ್ಕಿರೇಶ ಅಣ್ಣಿಗೇರಿ, ಇಸ್ಮಾಯಿಲ್ ಆಡೂರ, ಶರಣು ಗೋಡಿ, ಈರಣ್ಣ ಪೂಜಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರೇಡ್ 2 ತಹಸೀಲ್ದಾರ ಮಂಜುನಾಥ ಅಮಾಸಿ, ಡಿ.ಆರ್. ಡಿಎಸ್ಪಿ ವಿದ್ಯಾನಂದ ನಾಯಕ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ನೀಲಪ್ಪ ಕರ್ಜೆಕ್ಕಣ್ಣವರ, ಮಹೇಶ ಕಲಘಟಗಿ, ಥಾವರಪ್ಪ ಲಮಾಣಿ, ದಾದಾಪೀರ ಮುಚ್ಚಾಲೆ, ಸದಾನಂದ ನಂದೆಣ್ಣವರ, ಪ್ರಕಾಶ ಮಾದನೂರ, ಜಗದೀಶಗೌಡ ಪಾಟೀಲ, ಹೊನ್ನಪ್ಪ ವಡ್ಡರ, ಜಾಕೀರ ಹವಾಲ್ದಾರ, ನೀಲಪ್ಪ ಶರಸೂರಿ, ಫಕ್ಕಿರೇಶ ಭಜಕ್ಕನವರ, ವಿಜಯ ಕುಂಬಾರ, ಶಿವಪ್ಪ ಡಂಬಳ, ಹೆಸ್ಕಾಂ, ಅಗ್ನಿಶಾಮಕ, ಹಿರಿಯರು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. ಪಿಎಸ್‌ಐ ನಾಗರಾಜ ಗಡಾದ ಸ್ವಾಗತಿಸಿ ವಂದಿಸಿದರು. ಹವಾಲ್ದಾರ್ ಪ್ರಕಾಶ ಮ್ಯಾಗೇರಿ, ಶಿಕ್ಷಕ ಈಶ್ವರ ಮೆಡ್ಲೇರಿ ನಿರೂಪಿಸಿದರು.

ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಪಟ್ಟಣದಲ್ಲಿನ ಗಣೇಶ ಹಬ್ಬದ ಆಚರಣೆ ಮಾದರಿಯಾಗಲಿ. ಎಲ್ಲರೂ ಸೇರಿ ಒಂದೇ ದಿನ ಸಾರ್ವಜನಿಕ ಗಣಪತಿ ವಿಸರ್ಜನೆಯನ್ನು ವಿಜೃಂಭಣೆಯಿಂದ ಆಚರಿಸಿದರೆ ಪೊಲೀಸರಿಗೂ ಸೂಕ್ತ ಬಂದೋಬಸ್ತ್ ನೀಡಲು ಸಾಧ್ಯವಾಗುತ್ತದೆ. ಬೀಟ್ ಪೊಲೀಸ್ ಸರಿಯಾಗಿ ಕಾರ್ಯನಿರ್ವಹಿಸಿ ಗಣಪತಿ ಮಂಡಳಿಯವರು ಸ್ವಯಂ ಸೇವಕರನ್ನು ನೇಮಿಸಿಕೊಳ್ಳಿ. ಪುರಸಭೆಯವರು ಪಟಾಕಿ ಅಂಗಡಿಗಳನ್ನು ಮೈದಾನಕ್ಕೆ ಸ್ಥಳಾಂತರಿಸಿ, ರಸ್ತೆ ದುರಸ್ತಿ ಕಾರ್ಯ ಮಾಡಿಸಿ. ಪ್ರತಿಷ್ಠಾಪನೆಗೆ ಸಂಬಂಧಪಟ್ಟ ಪುರಸಭೆ, ಹೆಸ್ಕಾಂ, ಅಗ್ನಿ ಶಾಮಕ ಇಲಾಖೆಯಿಂದ ಪರವಾನಗಿ ತೆಗೆದುಕೊಳ್ಳಲು ಏಕ ಗವಾಕ್ಷಿ ವ್ಯವಸ್ತೆ ಮಾಡಲಾಗಿದೆ ಎಂದು ಎಸ್‌ಪಿ ರೋಹನ್ ಜಗದೀಶ್ ತಿಳಿಸಿದರು.


Spread the love

LEAVE A REPLY

Please enter your comment!
Please enter your name here