ರಾಮನಗರ: ಡಿಕೆಶಿ ಚನ್ನಪಟ್ಟಣದ ಒಂದೇ ಒಂದು ಅಭಿವೃದ್ಧಿ ಕಾಮಗಾರಿಗೆ ಹಿಡಿ ಮಣ್ಣು ಹಾಕಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, 16 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚನ್ನಪಟ್ಟಣದ ಒಂದೇ ಒಂದು ಅಭಿವೃದ್ಧಿ ಕಾಮಗಾರಿಗೆ ಹಿಡಿ ಮಣ್ಣು ಹಾಕಿಲ್ಲ. ಗ್ಯಾರಂಟಿಗಳಿಂದಾಗಿ ಮಣ್ಣು ಹಾಕಲು ಕೂಡ ಹಣವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಲ್ಲಿಗೆ ಮೊದಲು ನೀರಾವರಿ ಯೋಜನೆ ತಂದರು. ಬಳಿಕ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ ಹಾಗೂ ಬಸವರಾಜ ಬೊಮ್ಮಾಯಿ ಅನುದಾನ ನೀಡಿದರು. ಚನ್ನಪಟ್ಟಣಕ್ಕೆ ಯೋಗೇಶ್ವರ್ ಅವರ ಕೊಡುಗೆ ಏನೂ ಇಲ್ಲ ಎಂದರು. ಮೊದಲಿಗೆ ನಾನೇ ಅಭ್ಯರ್ಥಿ ಎಂದು ಡಿ.ಕೆ.ಶಿವಕುಮಾರ್ ಹೇಳಿಕೊಂಡರು.
ಆದರೆ ಅವರು ಅಭ್ಯರ್ಥಿಯಾಗಲಿಲ್ಲ. ಜಿಲ್ಲಾ ಉಸ್ತುವಾರಿಯ ಹೊಣೆಯನ್ನೂ ವಹಿಸಿಕೊಳ್ಳಲಿಲ್ಲ. ಡಿ.ಕೆ.ಶಿವಕುಮಾರ್ ರೈತರ ಬಗ್ಗೆ ಮಾತನಾಡುವುದಾದರೆ ಮೊದಲು ಸಾಲ ಮನ್ನಾ ಮಾಡಲಿ. ರೈತರ ವಿದ್ಯಾಭ್ಯಾಸಕ್ಕೆಂದು ನೀಡಿದ ವಿದ್ಯಾನಿಧಿ ಯೋಜನೆಯನ್ನು ನೀಡಲಿ. ಅದನ್ನು ಬಿಟ್ಟು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಹಣ ಲೂಟಿ ಮಾಡಿದ್ದಾರೆ ಎಂದು ದೂರಿದರು.