ಮೈಸೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಹೈಕಮಾಂಡ್ ಸೂಚನೆಯಂತೆ ತಣ್ಣಗಾಗಿದ್ದ ಪವರ್ ಶೇರಿಂಗ್ ಒಪ್ಪಂದದ ವಿಚಾರ ಇದೀಗ ಮತ್ತೆ ಮುನ್ನಲೆಗೆ ಬಂದಿದೆ.
ಇಂದು ತಮಿಳುನಾಡಿಗೆ ತೆರಳುವ ಮಾರ್ಗಮಧ್ಯೆ ಮೈಸೂರಿಗೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಮೊದಲು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರತ್ಯೇಕವಾಗಿ ಚರ್ಚಿಸಿದ ರಾಹುಲ್ ಗಾಂಧಿ, ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸೈಡ್ಗೆ ಕರೆದುಕೊಂಡು ಹೋಗಿ ಗುಪ್ತವಾಗಿ ಮಾತುಕತೆ ನಡೆಸಿದ್ದಾರೆ.
ವಿಮಾನದಿಂದ ಹೆಲಿಕಾಪ್ಟರ್ ಹತ್ತುವ ಮುನ್ನ ನಡೆದ ಈ ರಹಸ್ಯ ಚರ್ಚೆ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ. ಡಿಕೆ ಶಿವಕುಮಾರ್ ಅವರು ಪವರ್ ಶೇರಿಂಗ್ ಒಪ್ಪಂದವನ್ನು ರಾಹುಲ್ ಗಾಂಧಿಗೆ ನೆನಪು ಮಾಡಿದ್ರಾ? ಕೊಟ್ಟ ಮಾತು ಉಳಿಸಿಕೊಳ್ಳಲು ತಮ್ಮ ಡಿಮ್ಯಾಂಡ್ಗಳನ್ನು ಮುಂದಿಟ್ಟರಾ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿವೆ. ಡಿಕೆ ಶಿವಕುಮಾರ್ ಮತ್ತು ರಾಹುಲ್ ಗಾಂಧಿ ಮಾತನಾಡುತ್ತಿರುವ ಫೋಟೋಗಳು ಲಭ್ಯವಾಗಿದ್ದು, ಈ ಭೇಟಿ ರಾಜ್ಯ ಕಾಂಗ್ರೆಸ್ ಒಳರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.



