ಅಧರ್ಮದ ಕೆಲಸಗಳನ್ನು ಮಾಡದಿರಿ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಭಗವಾನ ಮಹಾವೀರರು ಜಗತ್ತಿಗೆ ಅಹಿಂಸೆ, ಶಾಂತಿ ಸೇರಿದಂತೆ ಸುಂದರ ಸಮಾಜ ರೂಪಗೊಳ್ಳಲು ಅಗತ್ಯವಿರುವ ನೀತಿ, ಸಿದ್ಧಾಂತಗಳನ್ನು ಬೋಧಿಸಿದರು. ಜೈನ ಧರ್ಮವು, ಭಾರತವು ಜಗತ್ತಿಗೆ ನೀಡಿದ ಬಹು ದೊಡ್ಡ ಕೊಡುಗೆಯಾಗಿದೆ ಎಂದು ಜೈನ ವಿದ್ವಾಂಸರಾದ ಮೈಸೂರಿನ ಡಾ. ಶುಭಚಂದ್ರ ಹೇಳಿದರು.

Advertisement

ಅವರು ಗುರುವಾರ ಸಂಜೆ ಇಲ್ಲಿನ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಉಪನ್ಯಾಸ ನೀಡಿದರು.

ಮಹಾವೀರರು ಅಹಿಂಸಾ ಅಣುವೃತ ಪಾಲನೆಯನ್ನು ಸಂಸಾರಿಕರಿಗೆ ಬೋಧಿಸಿದರು. ಸಂಕಲ್ಪ ಹಿಂಸೆಯನ್ನು ಜೈನ ಧರ್ಮ ವಿರೋಧಿಸುತ್ತದೆ. ಎಲ್ಲ ಜೀವಿಗಳನ್ನು ಸಮಭಾವದಿಂದ ಕಾಣುವ ಮನೋಧರ್ಮ ಜೈನರಲ್ಲಿದೆ. ಅಧರ್ಮವನ್ನು ಉಂಟುಮಾಡುವ ಯಾವ ಕೆಲಸವನ್ನು ಮಾಡಬಾರದು. ಭಾರತೀಯ ಧರ್ಮಗಳು ನೀತಿ, ಸಂಸ್ಕಾರವನ್ನು ಸದಾ ಕಾಲವೂ ಬೋಧಿಸುತ್ತಾ ಬಂದಿವೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿನ ಧರ್ಮದಾರ್ಶನಿಕರು ಶಾಂತಿ, ಸಂಸ್ಕಾರ, ಮೌಲ್ಯಯುತ ಬದುಕನ್ನು ವಿಶ್ವಕ್ಕೆ ನೀಡಿದ್ದು ಮಹಾನ್ ಕೊಡುಗೆಯಾಗಿದೆ ಎಂದರು.

ಕರ್ನಾಟಕ ರಾಜ್ಯ ಬಾಲ ವಿಕಾಸ ಅಕೆಡಾಮಿಯಿಂದ ಮಹಾನ್ ಪುರುಷರ, ದಾರ್ಶನಿಕರ ತತ್ವಗಳನ್ನು ಮತ್ತು ಧರ್ಮದ ಮೌಲ್ಯಗಳನ್ನು ಮಕ್ಕಳಿಗೆ ತಲುಪಿಸುವ ಮತ್ತು ಸಂಸ್ಕಾರವಂತ ಸಮಾಜ ರೂಪಿಸಲು ವಿನೂತನ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಸಂಗಮೇಶ ಬಬಲೇಶ್ವರ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಕೇರಳ ರಾಜ್ಯದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಆಲಗೂರ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಧಾರವಾಡ ದಿಗಂಬರ ಜೈನ್ ಸಮಾಜ ಟ್ರಸ್ಟ್ ಅಧ್ಯಕ್ಷ ಡಾ. ಅಶೋಕ ರೋಖಡೆ, ಶ್ವೇತಾಂಬರ ಜೈನ ಸಮಾಜದ ಅಧ್ಯಕ್ಷ ಫತೇಚಂದ ಸಾಗರಮಲಜಿ ಸೋಲಂಕಿ, ಸನ್ಮತಿ ಸೇವಾ ಸಮಿತಿ ಅಧ್ಯಕ್ಷ ಅಶೋಕ ಬಾಗಿ, ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜೀತ ಪ್ರಸಾದ, ಸಮಾಜದ ಮುಖಂಡ ದತ್ತಾ ಡೋರ್ಲೆ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಸಿಪಿಐ ದಯಾನಂದ ಇತರರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಜಿನದತ್ತ ಹಡಗಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಕುಲಪತಿ ಡಾ. ಸಿದ್ದು ಆಲಗೂರರನ್ನು ಸನ್ಮಾನಿಸಲಾಯಿತು.

ಲೌಕಿಕ ಪ್ರಪಂಚದಲ್ಲಿ ಬದುಕುವದನ್ನು ಜೈನ ಧರ್ಮ ಕಲಿಸಿದೆ. ಜೈನ ಸಮಾಜದ ತತ್ವಗಳನ್ನು ತಪ್ಪಾಗಿ ಅರ್ಥೈಸಬಾರದು. ಸದೃಡ ಸಮಾಜಕ್ಕೆ ಜೈನ, ಬೌದ್ಧ ಸೇರಿದಂತೆ ಅನೇಕ ಧರ್ಮಗಳು ತಮ್ಮ ಕೊಡುಗೆಗಳನ್ನು ನೀಡಿವೆ. ಇದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದು ಡಾ. ಶುಭಚಂದ್ರ ಹೇಳಿದರು.


Spread the love

LEAVE A REPLY

Please enter your comment!
Please enter your name here