ವಿಜಯಸಾಕ್ಷಿ ಸುದ್ದಿ, ಧಾರವಾಡ : ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಧಾರವಾಡದ ಓ.ಪಿ.ಡಿ ವಿಭಾಗದಲ್ಲಿ ವಿಶ್ವ ಬೈ ಪೋಲಾರ್ ದಿನಾಚರಣೆಯ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕ ಡಾ. ಅರುಣಕುಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೈ ಪೋಲಾರ್ ಒಂದು ಕ್ಲಿಷ್ಟಕರ ಮಾನಸಿಕ ಕಾಯಿಲೆಯಾಗಿದ್ದು, ಈ ಕಾಯಿಲೆಯು ಕೇವಲ ಅವರ ಮನಸ್ಥಿತಿ ಮೇಲೆ ಪರಿಣಾಮ ಬೀರುವುದಲ್ಲದೇ, ಅವರ ಜೀವನದ ಮೇಲೆ, ಕುಟುಂಬದ ಸದಸ್ಯರ ಮೇಲೆ ಹಾಗೂ ಸಮುದಾಯ ಮೇಲೆ ಪ್ರಭಾವ ಬೀರುತ್ತದೆ. ಈ ಕಾಯಿಲೆಯಲ್ಲಿ ಉನ್ಮಾದ ಹಾಗೂ ಖಿನ್ನತೆಯ ಲಕ್ಷಣಗಳು ಕೂಡಿಕೊಂಡಿರುತ್ತವೆ.
ಇಂತಹ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮನೋವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಮತ್ತು ಔಷಧೋಪಚಾರವನ್ನು ಕೊಡಿಸುವುದರಿಂದ ಗುಣಮುಖರಾಗಿ ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು ಜೀವನ ಮಾಡಲು ನೆರವಾಗುತ್ತದೆಂದರು.
ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಸತೀಶ್ ಕೌಜಲಗಿ ಮಾನಸಿಕ ಕಾಯಿಲೆಗಳ ಲಕ್ಷಣಗಳು, ಆರೈಕೆದಾರರಿಗೆ ಇರಬೇಕಾದ ಜವಾಬ್ದಾರಿಗಳು, ಚಿಕಿತ್ಸಾ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಸೈಕಿಯಾಟ್ರಿ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಶ್ರೀನಿವಾಸ ಕೊಸಗಿ, ಡಾ. ಮಂಜುನಾಥ ಭಜಂತ್ರಿ ಅತಿಥಿಗಳಾಗಿ ಭಾಗವಹಿಸಿದ್ದರು. ಕಾವೇರಿ ಕಿತ್ತೂರು ಪ್ರಾರ್ಥಸಿದರು. ವಿನೋದಾ ಹಿರೆಮಠ ಸ್ವಾಗತಿಸಿದರು. ಅಕ್ಷತಾ ತೋಟಗೇರ್ ನಿರೂಪಿಸಿದರು. ರಾಕೇಶ್ ವಂದಿಸಿದರು.
ಕಾರ್ಯಕ್ರಮದಲ್ಲಿ ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಸಿಬ್ಬಂದಿಗಳಾದ ಅಶೋಕ ಕೋರಿ, ಓಬಾ ನಾಯ್ಕ, ಪ್ರಶಾಂತ ಪಾಟೀಲ್, ಆರ್.ಎಮ್. ತಿಮ್ಮಾಪೂರ್, ಶ್ರೀದೇವಿ ಬಿರಾದಾರ, ಅನಂತರಾಮು ಬಿ.ಜಿ, ಸೈಕಿಯಾಟ್ರಿಕ್ ನರ್ಸಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಆರ್.ಶ್ರೀವಾಣಿ ಹಾಗೂ ಉಪನ್ಯಾಸಕರಾದ ಡಾ. ಸುಶೀಲ್ಕುಮಾರ್ ರೋಣದ, ಫಿಜಿಯೋಥೇರಪಿಸ್ಟ್ ಡಾ. ಇಸ್ಮೈಲ್, ಎಂ.ಫಿಲ್ ಇನ್ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್ ವಿಭಾಗದ ವಿದ್ಯಾರ್ಥಿಗಳಾದ ಲಕ್ಷ್ಮಿ ಮಲ್ಲಿಕ್, ಮೋನಿಶಾ, ರಂಜನಿ, ಸಚಿನ್ ಪ್ರಸಾದ್, ಯತೀಶ್ ಭಾರದ್ವಾಜ್ ಉಪಸ್ಥಿತರಿದ್ದರು.
ಡಿಮ್ಹಾನ್ಸ್ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರು ಹಾಗೂ ಸೈಕಿಯಾಟ್ರಿ ವಿಭಾಗದ ಮುಖ್ಯಸ್ಥ ಡಾ.ರಾಘವೆಂದ್ರ ನಾಯಕ್ ಮಾತನಾಡಿ, ಬೈ ಪೋಲಾರ್ ಮಾನಸಿಕ ಕಾಯಿಲೆಯ ಗುಣಲಕ್ಷಣಗಳು ಹಾಗೂ ಲಭ್ಯವಿರುವ ವೈಜ್ಞಾನಿಕ ಚಿಕಿತ್ಸಾ ಪದ್ಧತಿಗಳ ಕುರಿತು ವಿವರಿಸಿದರು.