ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ರಾಜ್ಯದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಇದೀಗ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಪರೀಕ್ಷೆಯೊಂದಕ್ಕೆ ಹಾಜರಾಗುವವರು ಮಂಗಳಸೂತ್ರ, ಧಾರ್ಮಿಕ ಸಂಕೇತಗಳನ್ನು ತೆಗೆದು ಹಾಜರಾಗಬೇಕು ಎಂದು ಪ್ರವೇಶ ಪತ್ರದಲ್ಲಿ ಉಲ್ಲೇಖಿಸಿರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು.
ಇದೀಗ ರೈಲ್ವೆ ಸಚಿವ ವಿ.ಸೋಮಣ್ಣ ಮಂಗಳಸೂತ್ರ ಹಾಗೂ ಜನಿವಾರ ತೆಗೆಸದಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಂಗಳವಾರ ರೈಲ್ವೆ ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ಪರೀಕ್ಷೆ ನಡೆಯಲ್ಲಿದ್ದು, ಈಗಾಗಲೇ ಪ್ರವೇಶ ಪತ್ರವು ಪರೀಕ್ಷಾರ್ಥಿಗಳ ಕೈ ಸೇರಿದೆ. ಪ್ರವೇಶ ಪತ್ರದಲ್ಲಿ ಜನಿವಾರ, ಮಂಗಳಸೂತ್ರ ತೆಗೆದು ಪರೀಕ್ಷೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಈ ವಿವಾದದ ಬೆನ್ನಲ್ಲೇ ರೈಲ್ವೆ ಇಲಾಖೆಯ ಪರೀಕ್ಷೆಯ ಪ್ರವೇಶಪತ್ರದಲ್ಲಿನ ಸೂಚನೆಗಳ ಬಗ್ಗೆ ಎಕ್ಸ್ ಖಾತೆಯಲ್ಲಿ ಟ್ವೀಟ್‌ನ ಮೂಲಕ ರೈಲ್ವೆ ಸಚಿವರಿಗೆ ದಕ್ಷಿಣ ಕನ್ನಡದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಚಿವ ವಿ.ಸೋಮಣ್ಣ ಮಂಗಳಸೂತ್ರ ಹಾಗೂ ಜನಿವಾರ ತೆಗೆಸದಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.