ವಿಜಯಸಾಕ್ಷಿ ಸುದ್ದಿ, ಗದಗ: ಗೋಹತ್ಯೆ ನಿಷೇಧ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಗೋಹತ್ಯೆಗೆ ಅನೂಕೂಲವಾದ ವಾತಾವರಣ ನಿರ್ಮಿಸುವುದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಹಾಗೆಯೇ, ಕಳೆದ ಬಾರಿ ಮೀಸಲಾತಿ ಹೋರಾಟದ ವೇಳೆ ನಡೆದ ಲಾಠಿಚಾರ್ಜ್ ಖಂಡಿಸಿ ಡಿ. 10ರಂದು ಬೆಳಗಾವಿಯಲ್ಲಿ `ಲಿಂಗಾಯತ ದೌರ್ಜನ್ಯ ದಿನ’ ಆಚರಿಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಹತ್ಯೆಯನ್ನು ನಿಷೇಧಿಸಬೇಕು ಎಂಬುದು ಕನ್ನಡಿಗರು ಹಾಗೂ ಸಮಸ್ತ ಭಾರತೀಯರ ಆಗ್ರಹವಾಗಿದೆ. ಸರಕಾರ ಇದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಅದನ್ನು ಬಿಟ್ಟು ಕಾಯಿದೆಗೆ ತಿದ್ದುಪಡಿ ತರಲು ಮುಂದಾದರೆ ಅದು ದಯಾಮೂಲ ಸಂಸ್ಕೃತಿಗೆ ಸರ್ಕಾರ ಮಾಡುತ್ತಿರುವ ವಿರೋಧವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ವರ್ಷ ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ನಡೆದ ಪಂಚಮಸಾಲಿ ಮೀಸಲಾತಿ ಹೋರಾಟದ ವೇಳೆ ರಾಜ್ಯ ಸರ್ಕಾರವೇ ಪೊಲೀಸರಿಗೆ ಕುಮ್ಮಕ್ಕು ನೀಡಿ ನಮ್ಮ ಸಮುದಾಯದ ಜನರ ಮೇಲೆ ಅಮಾನವೀಯವಾಗಿ, ಕಾನೂನುಬಾಹಿರವಾಗಿ ಮಾರಣಾಂತಿಕ ಹಲ್ಲೆ ನಡೆಸಿತ್ತು. ಸರ್ಕಾರವೊಂದು ಸಮುದಾಯದ ಮೇಲೆ ದೌರ್ಜನ್ಯ ಎಸಗಿದ್ದು ಇದೇ ಮೊದಲ ಬಾರಿಗೆ. ಇದು ನಮ್ಮ ಸಮುದಾಯದ ಸ್ವಾಭಿಮಾನಕ್ಕೆ ಬಿದ್ದ ಪೆಟ್ಟು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಡಿ. 10ರಂದು ಲಿಂಗಾಯತ ದೌರ್ಜನ್ಯ ದಿನವನ್ನಾಗಿ ಆಚರಿಸಲಾಗುವುದು. ಅಂದು ಬೆಳಗಾವಿಯ ಗಾಂಧಿ ಭವನದಿಂದ ಸುವರ್ಣ ವಿಧಾನಸೌಧದವರೆಗೆ ಕೈ ಹಾಗೂ ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು, ಪಂಚಮಸಾಲಿ ಧ್ವಜ ಹಿಡಿದು ಮೌನ ಪಥಸಂಚಲನ ನಡೆಸಲಾಗುವುದು. ಯಾವುದೇ ಜನಾಂಗದ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡದಿರುವಂತೆ ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇವೆ ಎಂದರು.
ಎಷ್ಟೇ ಲಾಠಿ ಏಟು, ಬೂಟಿನ ಏಟು ಕೊಟ್ಟರೂ ಅಥವಾ ಗುಂಡಿನ ದಾಳಿ ಮಾಡಿದರೂ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಸರ್ಕಾರ ದ್ವೇಷದಿಂದ ಹೋರಾಟ ಹತ್ತಿಕ್ಕಲು ನೋಡಿದರೆ ನಾವು ಪ್ರೇಮ, ಶಾಂತಿ ಮತ್ತು ನ್ಯಾಯದ ಮೂಲಕ ಹೋರಾಟ ಮುಂದುವರಿಸುತ್ತೇವೆ. ಬೆಳಗಾವಿಯ ಅದೇ ಸ್ಥಳದಿಂದ ಮತ್ತೊಮ್ಮೆ ಹೋರಾಟದ ಸಂಕಲ್ಪ ಮಾಡುತ್ತೇವೆ ಎಂದು ಶ್ರೀಗಳು ಸ್ಪಷ್ಟಪಡಿಸಿದರು.



