ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಎಲ್ಲ ಇಲಾಖಾ ಅಧಿಕಾರಿಗಳು ಸರಕಾರ ತಮಗೆ ಕೊಡಮಾಡಿದ ಸರಕಾರಿ ವಾಹನಗಳನ್ನು ಕಚೇರಿ ಕೆಲಸಕ್ಕೆ ಮಾತ್ರ ಉಪಯೋಗಿಸಬೇಕು. ಹೊರತುಪಡಿಸಿ ಸ್ವಂತಕ್ಕೆ ಉಪಯೋಗಿಸಬಾರದು ಎಂದು ಗದಗ ಲೋಕಾಯುಕ್ತ ಡಿಎಸ್‌ಪಿ ವಿಜಯ ಬಿರಾದಾರ ಹೇಳಿದರು.
ಅವರು ಬುಧವಾರ ಶಿರಹಟ್ಟಿಯ ತಹಸೀಲ್ದಾರ ಕಚೇರಿಯಲ್ಲಿ ಜರುಗಿದ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಕಾರಿ ವಾಹನವು ಕಡ್ಡಾಯವಾಗಿ ರಾತ್ರಿ ವೇಳೆಯಲ್ಲಿ ಕಚೇರಿಯಲ್ಲಿ ಇರಬೇಕು. ವ್ಯಾಪ್ತಿಯನ್ನು ಹೊರತುಪಡಿಸಿ ಬೇರೆ ಕಡೆಗೆ ಸರಕಾರಿ ವಾಹನವನ್ನು ತೆಗೆದುಕೊಂಡು ಹೋಗಬಾರದು. ಇಂದಿನ ಸಭೆಯಲ್ಲಿ 6 ಅರ್ಜಿಗಳು ಸ್ವೀಕೃತವಾಗಿದ್ದು, ಇದರಲ್ಲಿ 2 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗಿದೆ. ಪ್ರೌಢಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಮುಂದಾಗಬೇಕು. ವಸತಿ ನಿಲಯಗಳಲ್ಲಿ ವಾರ್ಡನ್‌ಗಳು ನಿಗದಿತ ಸಮಯಕ್ಕೆ ಸರಿಯಾಗಿ ಮೆನು ಪ್ರಕಾರ ಊಟ ಮತ್ತು ಉಪಹಾರ ವಿತರಿಸಲು ಸೂಚಿಸಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸಮರ್ಪಕ ಆಹಾರ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಿರಹಟ್ಟಿಯ ಪ.ಪಂ ವತಿಯಿಂದ ನಿರ್ಮಾಣ ಮಾಡಿದ ಮಾರಾಟ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ನಡೆಸಬೇಕೆಂದು ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಅನಿಲ ಬಡಿಗೇರ, ಲೋಕಾಯುಕ್ತ ಇನ್ಸಪೆಕ್ಟರ್ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.