ವಿಜಯಸಾಕ್ಷಿ ಸುದ್ದಿ, ಗದಗ: ಆಯುರ್ವೇದ ಶಾಸ್ತ್ರದಲ್ಲಿ ತಿಳಿಸಿದಂತೆ ನಮ್ಮ ಮನಸ್ಸು ಪ್ರಸನ್ನವಾಗಿದ್ದರೆ ಮಾತ್ರ ನಾವು ಸ್ವಸ್ಥರಾಗಿರುತ್ತೇವೆ. ಆದರೆ ಇಂದು ನಮ್ಮ ಮನಸ್ಸು ನಾನಾ ರೋಗ-ರುಜಿನಗಳ ಮತ್ತು ತಾಪತ್ರಯಗಳ ಗೂಡಾಗಿದೆ. ಹೀಗಾಗಿ ನಾವು ಸ್ವಸ್ಥರಾಗಿರದೆ ಸದಾ ಸುಸ್ತಾಗಿರುತ್ತೇವೆ. ನಾವು ಸ್ವಸ್ಥರಾಗಿರಬೇಕೆಂದರೆ ನಿತ್ಯ ಸತ್ಯ ಶುದ್ಧ ಕಾಯಕ ಮಾಡಿ, ಆ ಕಾಯಕದಿಂದ ದೊರೆತ ಪ್ರತಿಫಲದಲ್ಲಿ ಸ್ವಲ್ಪಾದರೂ ಸತ್ಕಾರ್ಯಗಳಿಗೆ ದಾಸೋಹ ಸಲ್ಲಿಸಬೇಕು. ಕಾಯಕ ಮಾಡುವುದರಿಂದ ದೈಹಿಕ ಶ್ರಮ ದೊರೆಯುವದು. ದಾಸೋಹ ಮಾಡುವುದರಿಂದ ಮನ ಪ್ರಸನ್ನವಾಗಿರುವುದು. ಇದರಿಂದ ನಾವು ಸ್ವಸ್ಥರಾಗಿರಲು ಸಾಧ್ಯವಾಗುತ್ತದೆ ಎಂದು ಬಸವ ತತ್ವಾಭಿಮಾನಿ, ಶಿವಸಂಗಮ ನಿರ್ದೇಶಕರಾದ ಎಂ.ಬಿ. ಲಿಂಗದಾಳ ಅಭಿಪ್ರಾಯಪಟ್ಟರು.
ಎಸ್.ವಾಯ್.ಬಿ.ಎಂ.ಎಸ್ ಯೋಗಪಾಠಶಾಲೆಯ ಬಸವ ಯೋಗ ಚಿಂತನ ಕೂಟ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಗದಗ ಇವರ ಸಹಯೋಗದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ 3ನೇ ಶ್ರಾವಣ ಸೋಮವಾರದ ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮದಲ್ಲಿ ವಚನ ಚಿಂತನ ಮಾಡಿ, ನಾವು ಯಾವುದೇ ಕಾರ್ಯ ಮಾಡಲಿ ಅದನ್ನು ನಿಷ್ಠೆ, ಶೃದ್ಧೆ, ಭಕ್ತಿಯಿಂದ ಮಾಡಬೇಕು. ಕಾಯಕ ಯಾವದೇ ಇರಲಿ, ಕಾಯಕ ಮಾಡುವವರನ್ನು ಪ್ರೋತ್ಸಾಹಿಸಬೇಕು. ಅವರನ್ನು ಮೂದಲಿಸಬಾರದು, ನೋಡಿ ಅಸೂಯೆ ಪಡಬಾರದು. ಮೋಳಿಗೆ ಮಾರಯ್ಯ ತನ್ನ ಕಾಯಕದಲ್ಲಿಯೇ ದೇವರನ್ನು ಕಂಡುಕೊಂಡರು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೇಷ್ಠ ಉದ್ಯಮಿ, ಶ್ರೇಷ್ಠ ವರ್ತಕ ಪ್ರಶಸ್ತಿ ವಿಜೇತ, ಶ್ರೀ ದತ್ತಾ ಡೆವಲಪರ್ಸ್ನ ರೂವಾರಿ ಕಿರಣ ಪಿ.ಭೂಮಾ ಮಾತನಾಡಿ, ನಾವು ಮಾಡುವ ಕಾಯಕದಲ್ಲಿ ಮೋಸ, ವಂಚನೆಗಳಿರಬಾರದು. ಆ ಕಾಯಕ ಸಮಾಜೋನ್ನತಿಗೆ ಪೂರಕವಾಗಿರಬೇಕು ಮತ್ತು ತೃಪ್ತಿದಾಯಕವಾಗಿರಬೇಕೆಂದು ಹೇಳಿದರು.
ಕಾರ್ಯಕ್ರಮದ ದಾಸೋಹ ಸೇವೆ ಮಹಾದೇವಿ ಚರಂತಿಮಠ, ವಿಜಯಲಕ್ಷ್ಮೀ ಉಪವಾಸಿ, ಪುಷ್ಪಾ ತಿಪ್ಪಶೆಟ್ಟಿ, ವಚನ ಸಂಗೀತ ಸೇವೆ ಸಲ್ಲಿಸಿದ ಜಯಶ್ರೀ ವಸ್ತçದ ಇವರೆಲ್ಲರಿಗೂ ಗೌರವಾದರಗಳನ್ನು ಸಮರ್ಪಿಸಲಾಯಿತು. ವೇದಿಕೆಯಲ್ಲಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ, ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೆದ ಉಪಸ್ಥಿತರಿದ್ದರು. ಸಭಾಂಗಣದಲ್ಲಿ ವಿ.ಎಂ. ಮುಂದಿನಮನಿ, ರವಿ ಹುಡೇದ, ಶಾಲಿನಿ ಮಾನ್ವಿ, ವೀಣಾ ಗೌಡರ, ವಿಜಯಲಕ್ಷ್ಮೀ ಮುಗಳಿ, ಅರುಣಾ ಇಂಗಳಳ್ಳಿ ಮುಂತಾದವರಿದ್ದರು.
ಗದಗ ತಾಲೂಕಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಲೋಚನಾ ಐಹೊಳ್ಳಿ ಸಾಮೂಹಿಕ ಬಸವ ಪ್ರಾರ್ಥನೆ ತಿಳಿಸಿದರು. ಮಹಾದೇವಿ ಚರಂತಿಮಠ ಧರ್ಮ ಗ್ರಂಥ ಪಠಣ ಮಾಡಿದರು. ಡಾ. ಎಂ.ವ್ಹಿ. ಐಹೊಳ್ಳಿ ಸ್ವಾಗತ ಕೋರಿದರು. ವಿಜಯಾ ಚನ್ನಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಎಸ್.ಬಿ. ಗೌಡರ ವಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕೃಷಿ ವಿಜ್ಞಾನಿ ಡಾ. ಎಸ್.ಕೆ. ನಾಲತ್ವಾಡಮಠ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಕಾಯಕ ಪ್ರವೃತ್ತಿ ಮರೆಯಾಗುತ್ತಲಿದೆ. ಕಾಯಕ ಮಾಡಿದರೂ ಅದಕ್ಕೆ ಹೆಚ್ಚಿನ ಪ್ರತಿಫಲದ ಬೇಡಿಕೆ ಹೆಚ್ಚುತ್ತಲಿದೆ. ಈ ವಾತಾವರಣ ದೂರಾಗಲು ನಾವೆಲ್ಲ ಬಸವಾದಿ ಶರಣರ ಜೀನವನ್ನು ಅನುಕರಣೆ ಮಾಡಬೇಕೆಂದು ಹೇಳಿದರು.