ನೈರ್ಮಲ್ಯದ ದೃಷ್ಟಿಯಿಂದ ಪ್ರತಿದಿನ ಸ್ನಾನ ಮಾಡುವುದು ಅತ್ಯಂತ ಉತ್ತಮ ಅಭ್ಯಾಸ. ಹೀಗಾಗಿ ಬಹುತೇಕ ಜನರು ದಿನವೂ ತಪ್ಪದೆ ಸ್ನಾನ ಮಾಡುತ್ತಾರೆ.
ಕೆಲವರು ತಣ್ಣೀರಿನಲ್ಲಿ, ಇನ್ನೂ ಕೆಲವರು ಉಗುರುಬೆಚ್ಚಗಿನ ನೀರಲ್ಲಿ, ಮತ್ತಷ್ಟು ಮಂದಿ ಚಳಿಗಾಲ ಮಾತ್ರವಲ್ಲದೆ ಬೇಸಿಗೆಯಲ್ಲಿಯೂ ಸುಡು ಬಿಸಿ ನೀರಿನಿಂದಲೇ ಸ್ನಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ.
ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹಕ್ಕೆ ರಿಲ್ಯಾಕ್ಸ್ ಸಿಗುತ್ತದೆ, ಸ್ನಾಯುಗಳ ಬಿಗಿತ ಕಡಿಮೆಯಾಗುತ್ತದೆ ಎಂಬ ಭಾವನೆ ಇದೆ. ಆದರೆ ತಜ್ಞರ ಪ್ರಕಾರ, ಅತಿಯಾಗಿ ಬಿಸಿ ನೀರನ್ನು ಬಳಸುವುದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಹಾಗಾದರೆ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಉಂಟಾಗುವ ಸಮಸ್ಯೆಗಳೇನು ಎಂಬುದನ್ನು ನೋಡೋಣ.
ಚರ್ಮ ಒಣಗುವುದು:
ಬಿಸಿನೀರಿನ ಸ್ನಾನ ಚರ್ಮದ ನೈಸರ್ಗಿಕ ತೇವಾಂಶ ಮತ್ತು ರಕ್ಷಣಾತ್ಮಕ ತೈಲಗಳನ್ನು ತೆಗೆದುಹಾಕುತ್ತದೆ. ಇದರಿಂದ ಚರ್ಮ ಒಣಗುವುದು, ತುರಿಕೆ, ಕಿರಿಕಿರಿ ಹಾಗೂ ಚರ್ಮದ ಅಲರ್ಜಿ ಸಮಸ್ಯೆಗಳು ಉಂಟಾಗಬಹುದು.
ಕೂದಲು ಮತ್ತು ನೆತ್ತಿಗೆ ಹಾನಿ:
ಬಿಸಿನೀರು ಕೂದಲಿನ ನೆತ್ತಿಯಲ್ಲಿರುವ ನೈಸರ್ಗಿಕ ಎಣ್ಣೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇದರಿಂದ ನೆತ್ತಿ ಒಣಗುವುದು, ತಲೆಹೊಟ್ಟು ಹೆಚ್ಚಾಗುವುದು ಹಾಗೂ ಕೂದಲು ಉದುರುವಿಕೆ ಸಮಸ್ಯೆ ತೀವ್ರವಾಗಬಹುದು.
ರಕ್ತದೊತ್ತಡದಲ್ಲಿ ಏರಿಳಿತ:
ಸುಡು ಬಿಸಿನೀರಿನಲ್ಲಿ ಸ್ನಾನ ಮಾಡುವಾಗ ದೇಹದ ರಕ್ತನಾಳಗಳು ಹಿಗ್ಗುತ್ತವೆ. ಇದರಿಂದ ರಕ್ತದೊತ್ತಡ ಹಠಾತ್ವಾಗಿ ಕಡಿಮೆಯಾಗಿ ತಲೆತಿರುಗುವಿಕೆ, ಆಯಾಸ ಅಥವಾ ದುರ್ಬಲತೆ ಕಾಣಿಸಿಕೊಳ್ಳಬಹುದು.
ಕಣ್ಣುಗಳಿಗೆ ತೊಂದರೆ:
ಬಿಸಿ ನೀರಿನ ಆವಿಯ ನೇರ ಸಂಪರ್ಕ ಕಣ್ಣುಗಳ ನೈಸರ್ಗಿಕ ತೇವಾಂಶವನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ಕಣ್ಣುಗಳು ಕೆಂಪಾಗುವುದು, ಉರಿ ಮತ್ತು ತುರಿಕೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ದೇಹದ ತಾಪಮಾನ ಅಸಮತೋಲನ:
ನಿರಂತರವಾಗಿ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸ ದೇಹದ ನೈಸರ್ಗಿಕ ತಾಪಮಾನ ನಿಯಂತ್ರಣ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಇದರಿಂದ ಚಳಿ ಹವಾಮಾನವನ್ನು ಎದುರಿಸುವ ಶಕ್ತಿ ಕಡಿಮೆಯಾಗಬಹುದು.
ತಜ್ಞರ ಸಲಹೆ:
ಸ್ನಾನಕ್ಕೆ ಯಾವಾಗಲೂ ಉಗುರು ಬೆಚ್ಚಗಿನ ನೀರನ್ನು ಬಳಸುವುದು ಉತ್ತಮ. ಇದರಿಂದ ಚರ್ಮದ ತೇವಾಂಶ ಕಾಪಾಡಿಕೊಳ್ಳಬಹುದು, ನೈಸರ್ಗಿಕ ಎಣ್ಣೆಗಳು ಉಳಿಯುತ್ತವೆ ಹಾಗೂ ಕೂದಲು ಮತ್ತು ನೆತ್ತಿಗೆ ಹಾನಿಯಾಗುವುದಿಲ್ಲ.



