ಬೆಂಗಳೂರು:- ಬಾಲಾಪರಾಧಗಳಲ್ಲಿ ದೇಶದಲ್ಲೇ ಸಿಲಿಕಾನ್ ಸಿಟಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಇತ್ತೀಚಿನ ಅಂಕಿಅಂಶಗಳಿಂದ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
2023 ರಲ್ಲಿ ನಗರದಲ್ಲಿ 427 ಬಾಲಾಪರಾಧ ಪ್ರಕರಣಗಳು ವರದಿಯಾಗಿದ್ದವು. 2022 ರಲ್ಲಿ 200 ಮತ್ತು 2021 ರಲ್ಲಿ 177 ಪ್ರಕರಣಗಳು ದಾಖಲಾಗಿದ್ದರೆ, ಅದಾದ ನಂತರ ಏಕಾಏಕಿ ಪ್ರಕರಣಗಳ ಸಂಖ್ಯೆಯಲ್ಲಿ ಜಿಗಿತ ಕಂಡುಬಂದಿದೆ. 2023ರಲ್ಲಿ 523 ಪ್ರಕರಣಗಳನ್ನು ದಾಖಲಿಸಿರುವ ಚೆನ್ನೈ ಮೊದಲ ಸ್ಥಾನದಲ್ಲಿದೆ.
ಎನ್ಸಿಆರ್ಬಿ ದತ್ತಾಂಶವು ಇತರ ಮಹಾನಗರಗಳಲ್ಲಿ ಬಾಲಾಪರಾಧಗಳಲ್ಲಿ ಇಳಿಕೆ ಮತ್ತು ಏರಿಕೆಯಾಗಿರುವುದನ್ನು ತೋರಿಸಿದೆ. ಹೈದರಾಬಾದ್‌ನಲ್ಲಿ 2022 ರಲ್ಲಿ 300 ಪ್ರಕರಣಗಳು ಇದ್ದದ್ದು, 2023 ರಲ್ಲಿ 180 ಕ್ಕೆ ಇಳಿಕೆಯಾಗಿದೆ. ಆದರೆ ಕೋಲ್ಕತ್ತಾದಲ್ಲಿ 2022 ರಲ್ಲಿ 9 ರಿಂದ 2023 ರಲ್ಲಿ 115 ಕ್ಕೆ ಏರಿಕೆಯಾಗಿದೆ.
ಇನ್ನೂ ಮಾಧ್ಯಮಗಳಲ್ಲಿ ಅಪರಾಧದ ವೈಭವೀಕರಣ, ರೌಡಿಯಿಸಂನಿಂದ ಬೇಗನೆ ಫೇಮಸ್ ಆಗಿಬಿಡುತ್ತೇವೆ ಎಂಬ ಯುವ ಜನರ ಭ್ರಮೆಯೇ ಗಂಭೀರ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಕಾರಣ. ಅದರಲ್ಲಿಯೂ ಬಾಲಾಪರಾದಗಳ ಹೆಚ್ಚಳಕ್ಕೆ ಕಾರಣ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.