ಬಿಗ್ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಆಗಿ ಅಂತ್ಯ ಹಾಡಿದೆ. ಈ ಬಾರಿಯ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರು ಆಗುತ್ತಾರೆ ವೀಕ್ಷಕರಲ್ಲಿ ಭಾರೀ ಕುತೂಹಲ ಮನೆ ಮಾಡಿತ್ತು. ಅದರಲ್ಲೂ ಫೈನಲ್‌ನಲ್ಲಿ ಹನುಮಂತ ಗೆಲ್ಲುತ್ತಾರಾ ಅಥವಾ ತ್ರಿವಿಕ್ರಮ್ ಗೆಲ್ಲುತ್ತಾರಾ ಅಂತ ಗೊಂದಲ ಮನೆ ಮಾಡಿತ್ತು. ಇದೀಗ ಆ ಎಲ್ಲ ಗೊಂದಲಕ್ಕೆ ಕಿಚ್ಚ ಸುದೀಪ್ ಅವರು ತೆರೆ ಎಳೆದಿದ್ದಾರೆ.
ಕಿಚ್ಚ ಸುದೀಪ್ ಅವರು ಹನುಮಂತನ ಹೆಸರನ್ನು ಜೋರಾಗಿ ಕೂಗುವ ಮೂಲಕ ವಿನ್ನರ್ ಯಾರೆಂದು ಹೇಳಿದ್ದಾರೆ. ಇನ್ನೂ ಹನುಮಂತ ಅವರಿಗೆ 50 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ. 50 ಲಕ್ಷ ರೂ. ಬಹುಮಾನ ಸಿಕ್ಕಿದರೂ ಅವರಿಗೆ ಪೂರ್ಣ ಪ್ರಮಾಣದ ಹಣ ಕೈ ಸೇರುವುದಿಲ್ಲ.
ನಗದು ಬಹುಮಾನ ಮೊತ್ತಕ್ಕೆ 30% ಗಿಫ್ಟ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಹೀಗಾಗಿ ಸಿಗುವ ಬಹುಮಾನದಲ್ಲಿ 30% ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ. 1961ರ ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ, ಗೇಮ್ ಶೋಗಳು, ಲಾಟರಿಗಳು ಮತ್ತು ಅಂತಹುದೇ ಚಟುವಟಿಕೆಗಳಿಂದ ಗೆದ್ದ ಹಣವನ್ನು ಇತರ ಮೂಲಗಳಿಂದ ಬಂದ ಆದಾಯ ಎಂದು ವರ್ಗೀಕರಿಸಲಾಗಿದೆ.
ಕಾಯ್ದೆಯ ಸೆಕ್ಷನ್ 194B ಪ್ರಕಾರ ಈ ಗೆಲುವಿನ ಮೇಲೆ 30% ರಷ್ಟು ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ. ವಿಜೇತರು 1% ರಷ್ಟು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಸೆಸ್ ಅನ್ನು ಸಹ ಪಾವತಿಸಬೇಕಾಗುತ್ತದೆ. ಇದರಿಂದ ಒಟ್ಟು ತೆರಿಗೆ ದರ 31.2% ಏರಿಕೆಯಾಗುತ್ತದೆ. ಇದರ ಜೊತೆ ಬಹುಮಾನದ ಹಣವು 10 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಹೆಚ್ಚುವರಿಯಾಗಿ 10% ಶುಲ್ಕ ಅನ್ವಯಿಸಲಾಗುತ್ತದೆ.
ಎಷ್ಟು ಸಿಗಬಹುದು?
ಈ ಮೊದಲು ಬೇರೆ ಬೇರೆ ಬಿಗ್ ಬಾಸ್ ಶೋ ವಿಜೇತರಿಗೆ ನಗದು ಬಹುಮಾನ ಮೌಲ್ಯ 50 ಲಕ್ಷ ರೂ., 1 ಕೋಟಿ ರೂ. ಇರುತ್ತಿತ್ತು. ಆದರೆ ಈಗ ಎಲ್ಲಾ ಬಿಗ್ ಬಾಸ್ ಶೋ ವಿಜೇತರಿಗೆ 50 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ.
ಹನುಮಂತ ಅವರಿಗೆ ತೆರಿಗೆ, ಸೆಸ್ ಎಲ್ಲಾ ಕಡಿತಗೊಂಡು 34,40,000 ರೂ. ಸಿಗಬಹುದು. ಬಹುಮಾನದಲ್ಲಿ 15,60,000 ರೂ. ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹೋಗುತ್ತದೆ. ಬಿಗ್ ಬಾಸ್ ಶೋದಲ್ಲಿ ಬಹುಮಾನ ಮುಖ್ಯವಲ್ಲ. ಭಾಗವಹಿಸುವುದೇ ಮುಖ್ಯ ಆಗಿರುತ್ತದೆ. ಯಾಕೆಂದರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ದೊಡ್ಡ ಮಟ್ಟದ ಜನಪ್ರಿಯತೆ ಸಿಗುತ್ತದೆ. ಎಲ್ಲೂ ಹೋದರೂ ಬಿಗ್ ಬಾಸ್ ಸ್ಪರ್ಧಿ ಎಂದೇ ಕರೆದು ಗೌರವಿಸುತ್ತಾರೆ.
ಇನ್ನೂ, ಬಿಗ್ಬಾಸ್ ಕನ್ನಡ ಸೀಸನ್ 11ಕ್ಕೆ ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗಮನ ಸೆಳೆದರು. ಅವರ ಆಟ ಎಲ್ಲರಿಗೂ ಇಷ್ಟ ಆಯಿತು. ಚಾಣಾಕ್ಷತನದಿಂದ ಅವರು ಆಟ ಆಡಿ ಭೇಷ್ ಎನಿಸಿಕೊಂಡರು. ಫಿನಾಲೆ ಟಿಕೆಟ್ ಪಡೆದ ಮೊದಲ ಸ್ಪರ್ಧಿ ಇವರಾಗಿದ್ದರು. ಈಗ ಕಪ್ ಕೂಡ ಗೆದ್ದುಕೊಂಡಿದ್ದಾರೆ. ಪ್ರತಿ ಸೀಸನ್ನಲ್ಲಿ ವಿನ್ನರ್ಗೆ ಟ್ರೋಫಿ ಜೊತೆಗೆ 50 ಲಕ್ಷ ರೂಪಾಯಿ ಹಣವನ್ನು ಕೊಟ್ಟಿದ್ದಾರೆ.