ರಕ್ತದಾನವೆಂದರೆ ಜೀವದಾನ: ಹಾಗಿದ್ರೆ ಜೀವನದಲ್ಲಿ ಎಷ್ಟು ಬಾರಿ ರಕ್ತದಾನ ಮಾಡಬಹುದು? ನೀವು ತಿಳಿಯಿರಿ!

0
Spread the love

ರಕ್ತದಾನವೇ ಶ್ರೇಷ್ಠ ದಾನ ಎಂದು ಹೇಳಲಾಗುತ್ತದೆ. ಇದು ಸಂಪೂರ್ಣವಾಗಿ ನಿಜ. ಜೀವನ್ಮರಣದ ಹೋರಾಟದಲ್ಲಿರುವವರಿಗೆ ರಕ್ತದಾನ ಮಾಡುವ ಮೂಲಕ ಬದುಕು ನೀಡುವುದು ನಿಜಕ್ಕೂ ಉತ್ತಮವಾದ ಕೆಲಸ. ಹಾಗೆಯೇ ರಕ್ತದಾನ ಮಾಡುವುದರಿಂದ ನಮ್ಮಲ್ಲಿ ಕೆಲವು ರೋಗಗಳು ಬಾರದಂತೆ ತಡೆಯಬಹುದು. ಆಗಾಗ ರಕ್ತದಾನ ಮಾಡುವುದರಿಂದ ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ಹೌದು, ರಕ್ತದಾನ ಮಾಡುವುದರಿಂದ ರಕ್ತದಲ್ಲಿನ ಹೆಚ್ಚುವರಿ ಕಬ್ಬಿಣಾಂಶವನ್ನು ಕಡಿಮೆ ಮಾಡುತ್ತದೆ. ಕಬ್ಬಿಣವು ಅನೇಕ ದೈಹಿಕ ಕಾರ್ಯಗಳಿಗೆ ಅತ್ಯಗತ್ಯವಾದರೂ, ಹೆಚ್ಚುವರಿ ಕಬ್ಬಿಣವು ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ರಕ್ತದಾನ ಮಾಡುವ ಮೂಲಕ, ಹೆಚ್ಚುವರಿ ಕಬ್ಬಿಣವನ್ನು ಕಡಿಮೆ ಮಾಡಬಹುದು, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Advertisement

ರಕ್ತವನ್ನು ದಾನ ಮಾಡುವುದರಿಂದ ಒಬ್ಬ ರೋಗಿಯ ಜೀವ ಉಳಿಸಿದ ಪುಣ್ಯ ಲಭ್ಯವಾಗುತ್ತದೆ. ಆದರೆ ಒಬ್ಬ ವ್ಯಕ್ತಿ ಜೀವನದಲ್ಲಿ ಎಷ್ಟು ಬಾರಿ ರಕ್ತದಾನ ಮಾಡಬಹುದು? ಇದರಿಂದ ಯಾವ ರೀತಿಯ ಆರೋಗ್ಯ  ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.

ರಕ್ತಕ್ಕೆ ರಕ್ತ ಬದಲಿಯಾಗಬಹುದೇ ಹೊರತು ಇದನ್ನು ಕೃತಕವಾಗಿ ತಯಾರಿಸಲು ಸಾಧ್ಯ ಇಲ್ಲ. ಹಾಗಾಗಿ ಒಬ್ಬ ಆರೋಗ್ಯವಂತ ವ್ಯಕ್ತಿ ವರ್ಷಕ್ಕೊಮ್ಮೆಯಾದರೂ ರಕ್ತದಾನ ಮಾಡುವ ಮೂಲಕ ಕೇವಲ ವ್ಯಕ್ತಿಯ ಜೀವ ಉಳಿಸುವುದು ಮಾತ್ರವಲ್ಲ, ಈ ರೀತಿಯ ಅಭ್ಯಾಸ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಬಹುದು.ಆದರೆ ಕೆಲವರಿಗೆ ಈ ಬಗ್ಗೆ ಹಲವು ರೀತಿಯ ಅನುಮಾನಗಳಿರುತ್ತದೆ. ಅಂದರೆ ರಕ್ತದಾನ ಎಷ್ಟು ಬಾರಿ ಮಾಡಬೇಕು? ಯಾರು ಮಾಡಬಹುದು? ರಕ್ತದಾನ ಬೇರೆಯವರಿಗೆ ಕೊಟ್ಟರೆ ನಮಗೆ ಲಾಭವಿದೆಯೇ? ಹೀಗೆ ನೂರಾರು ಪ್ರಶ್ನೆಗಳಿರುತ್ತವೆ. ಈ ಕುರಿತಾದ ಗೊಂದಲಗಳಿಗೆ ಉತ್ತರ ಇಲ್ಲಿದೆ.

ವಿಷಯದ ಕುರಿತು ಸ್ತ್ರೀ ರೋಗ ತಜ್ಞೆ ಡಾ. ಬಾಹುಬಲಿ ಅಸ್ಕಿ ಅವರು ನೀಡಿರುವ ಮಾಹಿತಿಯ ಪ್ರಕಾರ, ಒಬ್ಬ ಆರೋಗ್ಯವಂತ ಯುವಕ ಅಥವಾ ಯುವತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ಇನ್ನು ಕೆಲವರು ಮೂರು ತಿಂಗಳಿಗೊಮ್ಮೆ ಮಾಡುತ್ತಾರೆ. ಆದರೆ ಸಾಧ್ಯವಾದಲ್ಲಿ ವರ್ಷಕ್ಕೆ ಒಮ್ಮೆಯಾದರೂ ರಕ್ತದಾನ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇನ್ನು ಒಬ್ಬ ವ್ಯಕ್ತಿಯಿಂದ 470 ಮಿಲಿಲೀಟರ್ ರಕ್ತವನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ರಕ್ತದಾನ ಮಾಡಿ ಒಬ್ಬರ ಜೀವ ಉಳಿಸಿ ಎಂದಿದ್ದಾರೆ.

ಸಾಮಾನ್ಯವಾಗಿ ರಕ್ತ ಪಡೆಯುವುದಕ್ಕಿಂತ ಮೊದಲು ವೈದ್ಯರು ವ್ಯಕ್ತಿಯನ್ನು ಪರೀಕ್ಷಿಸುತ್ತಾರೆ. ಆರೋಗ್ಯವಂತ ವ್ಯಕ್ತಿಯಿಂದ ಮಾತ್ರ ರಕ್ತ ತೆಗೆದುಕೊಳ್ಳಲಾಗುತ್ತದೆ. ಆದರೆ ಕೆಲವರು ರಕ್ತದಾನ ಮಾಡಲು ಅರ್ಹರಾಗಿರುವುದಿಲ್ಲ. ಇನ್ನು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು, ಅಂತೆಯೇ, ರಕ್ತಹೀನತೆಯ ಸಮಸ್ಯೆ ಇರುವವರಿಂದ ರಕ್ತ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅವರಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇರುತ್ತದೆ. ಇದರ ಹೊರತಾಗಿ ಗಂಭೀರ ಕಾಯಿಲೆಯಿಂದ ಚೇತರಿಸಿಕೊಂಡವರಿಂದ, ಯಾವುದೇ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾದವರಿಂದ ರಕ್ತವನ್ನು ಪಡೆಯುವುದಿಲ್ಲ.

ರಕ್ತದಾನ ಮಾಡುವುದರಿಂದ ಸಿಗುವ ಪ್ರಯೋಜನಗಳೇನು?

* ಹೃದಯದ ಆರೋಗ್ಯ ಕಾಪಾಡಲು ರಕ್ತದಾನ ಸಹಾಯ ಮಾಡುತ್ತದೆ. ಕೆಲವು ಅಧ್ಯಯನಗಳಿಂದ ತಿಳಿದು ಬಂದ ಮಾಹಿತಿ ಅನುಸಾರ, ನಿಯಮಿತವಾಗಿ ರಕ್ತದಾನ ಮಾಡುವ ವ್ಯಕ್ತಿಗಳಿಗೆ ಹೃದಯಾಘಾತವಾಗುವ ಸಂಭವ ಉಳಿದವರಿಗಿಂತ ಕಡಿಮೆಯಾಗಿದೆ.

* ರಕ್ತದಲ್ಲಿ ಕಬ್ಬಿಣದ ಅಂಶ ಹೆಚ್ಚಾದಂತೆಲ್ಲಾ ಯಕೃತ್ತು ಹಲವಾರು ಕಾಯಿಲೆಗಳಿಗೆ ತುತ್ತಾಗಬಹುದು. ಕೆಲವೊಮ್ಮೆ ಕ್ಯಾನ್ಸರ್, ಹೆಪಟೈಟಿಸ್ ಸಿ ಮತ್ತು ಇತರ ಯಕೃತ್ ನ ಸೋಂಕುಗಳು ಎದುರಾಗಬಹುದು. ಆದರೆ ರಕ್ತದಾನದ ಮಾಡಿದಾಗ ದೇಹದಲ್ಲಿ ಕಬ್ಬಿಣದ ಅಂಶ ಸಮತೋಲನದಲ್ಲಿರುತ್ತದೆ ಹಾಗೂ ಈ ಮೂಲಕ ಯಕೃತ್ ಗೂ ಹೊರೆ ಯಾಗುವುದಿಲ್ಲ.

* ಸಾಮಾನ್ಯವಾಗಿ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗುವುದಲ್ಲದೆ ಉದ್ವೇಗ, ಒತ್ತಡ, ಮನಸಿನ ತಳಮಳ ಹಾಗೂ ಖಿನ್ನತೆ ದೂರವಾಗುತ್ತದೆ

.


Spread the love

LEAVE A REPLY

Please enter your comment!
Please enter your name here