ದಾಳಿಂಬೆ ಹಣ್ಣು ವರ್ಷ ಪೂರ್ತಿ ಅಂದರೆ, ಎಲ್ಲಾ ಸೀಸನ್‌ನಲ್ಲೂ ಮಾರುಕಟ್ಟೆಗಳಲ್ಲಿ ಸಿಗುವಂತಹ ಹಣ್ಣು ಎಂದರೆ ತಪ್ಪಾಗಲಾರದು. ಈ ಹಣ್ಣಿನಲ್ಲಿ ಪಾಲಿಫಿನಾಲ್ ಎಂಬ ಪ್ರಬಲ ಆಂಟಿ ಆಕ್ಸಿಡೆಂಟ್ ಅಂಶಗಳು ಯಥೇಚ್ಛವಾಗಿ ಕಂಡು ಬರುವುದರ ಜೊತೆಗೆ,
ಹಲವಾರು ಬಗೆಯ ಪೋಷಕಾಂಶಗಳು, ವಿಟಮಿನ್ಸ್‌ಗಳು, ಖನಿಜಾಂಶಗಳು, ಫೋಲಿಕ್ ಆಮ್ಲಗಳು, ಈ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ, ಹಲವಾರು ಕಾಯಿಲೆ ಗಳನ್ನು ನಮ್ಮಿಂದ ದೂರವಿರಿಸುತ್ತದೆ.
ಉತ್ತಮ ಹೃದಯದ ಆರೋಗ್ಯ:
ದಾಳಿಂಬೆ ಸೇವನೆಯು ಹೃದಯಾಘಾತದ ಅಪಾಯ ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ. ಇದು ಅನಗತ್ಯವಾಗಿ ರಕ್ತ ಹೆಪ್ಪುಗಟ್ಟುವುದನ್ನು ತಡೆದು, ರಕ್ತ ಸೂಕ್ತ ರೀತಿಯ ಚಲನೆಗೆ ಸಹಾಯ ಮಾಡುತ್ತದೆ. ಇದರಿಂದ ಹೃದಯ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ದಾಳಿಂಬೆಯಲ್ಲಿ ಫೈಬರ್ ಪ್ರಮಾಣವು ಕಂಡುಬರುತ್ತದೆ, ಇದು ದೇಹದಲ್ಲಿ ನೀರಿನ ಕೊರತೆಯನ್ನು ಪೂರೈಸಲು ಕೆಲಸ ಮಾಡುತ್ತದೆ. ಆದ್ದರಿಂದ ದಾಳಿಂಬೆ ಸೇವನೆ ಹೃದಯದ ಆರೋಗ್ಯಕ್ಕೆ ಉತ್ತಮ ಎಂದು ವೈದ್ಯರು ಹೇಳುತ್ತಾರೆ.
ಮಾರಕ ಕ್ಯಾನ್ಸರ್’ಗೆ ರಾಮಬಾಣ:
ದಾಳಿಂಬೆ ಹಣ್ಣುಗಳಲ್ಲಿ ಹಲವಾರು ಆಂಟಿ ಆಕ್ಸಿಡೆಂಟುಗಳು ಇರುತ್ತವೆ. ಇವು ಪೌಷ್ಠಿಕಾಂಶವನ್ನು ನೀಡುವ ಮೂಲಕ ದೇಹದ ಶಕ್ತಿಯನ್ನು ಹೆಚ್ಚಿಸುತ್ತವೆ. ಆದ್ದರಿಂದ ಕ್ಯಾನ್ಸರ್ ವಿರುದ್ಧ ದೇಹ ಹೋರಾಡಲು ಸಹಾಯಕವಾಗುತ್ತದೆ. ದಾಳಿಂಬೆ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ. ಇದರ ಗುಣಲಕ್ಷಣಗಳು ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ಕೋಶಗಳನ್ನು ಹೆಚ್ಚಿಸುವುದನ್ನು ತಡೆಯುತ್ತದೆ. ಕ್ಯಾನ್ಸರ್ ಇದ್ದವರು ಅಥವಾ ಕ್ಯಾನ್ಸರ್ ಲಕ್ಷಣಗಳು ಗೋಚರಿಸುತ್ತಿದ್ದವರು ದಾಳಿಂಬೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್ ಆಗಮನವನ್ನು ದೂರವಿಡಬಹುದು.
ಚರ್ಮದ ಆರೋಗ್ಯ ವೃದ್ಧಿ:
ದಾಳಿಂಬೆ ಸೇವನೆಯಿಂದ ಚರ್ಮದ ಆರೋಗ್ಯ ವೃದ್ಧಿಯಾಗುತ್ತದೆ. ಇದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಚರ್ಮದಲ್ಲಿನ ಕಪ್ಪು ಕಲೆ, ಮುಖದಲ್ಲಿನ ಎಣ್ಣೆಯಾಂಶ ಹೋಗಲಾಡಿಸಲು ದಾಳಿಂಬೆ ಸಹಾಯಕಾರಿ. ಹಾಗೂ ವಿವಿಧ ಚರ್ಮದ ಸಮಸ್ಯೆಗಳಿಗೂ ದಾಳಿಂಬೆ ಸೇವನೆಯಿಂದ ಪರಿಹಾರ ಕಂಡುಕೊಳ್ಳಬಹುದು. ಜೊತೆಗೆ ದಾಳಿಂಬೆಯು ಮೊಡವೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.
ದಾಳಿಂಬೆ ಬೀಜಗಳನ್ನು ಅರಿಶಿನದೊಂದಿಗೆ ಪುಡಿಮಾಡಿ ಮೊಡವೆಗಳಾಗಿರುವ ಸ್ಥಳಕ್ಕೆ ಲೇಪಿಸಿದರೆ ಮೊಡವೆ ನಿವಾರಣೆಯಾಗುತ್ತದೆ. ಹಾಗೂ ದಾಳಿಂಬೆ ಹಣ್ಣಿನಲ್ಲಿರುವ ಮಿಟಮಿನ್‍ಗಳು ಕೂದಲಿನ ನೈಸರ್ಗಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕಪ್ಪು ಮತ್ತು ಉದ್ದನೆಯ ಕೂದಲು ಬೆಳೆಯಲು ದಾಳಿಂಬೆ ನೆರವಾಗುತ್ತದೆ. ಕೂದಲು ಸೀಳುವುದು, ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ.
ದಾಳಿಂಬೆ ಕಬ್ಬಿಣದ ಖಜಾನೆ:
ಮಾನವನ ದೇಹದಲ್ಲಿ ಹೆಚ್ಚಿನ ಶಕ್ತಿ ತುಂಬಲು ರಕ್ತದಲ್ಲಿ ಕಬ್ಬಿಣದ ಅಂಶಇರುವುದು ತುಂಬಾ ಮುಖ್ಯ. ಕಬ್ಬಿಣದ ಅಂಶ ಕಡಿಮೆಯಾದರೆ ದಾಳಿಂಬೆ ವೈದ್ಯರು ತಿನ್ನಲು ಸಲಹೆ ನೀಡುತ್ತಾರೆ. ಇದರಲ್ಲಿ ಕಬ್ಬಿಣದ ಅಂಶ ತುಂಬಾ ಹೆಚ್ಚಿರುವುದರಿಂದ ದಾಳಿಂಬೆ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ಆಯ್ಕೆಯಾಗಿದೆ. ಪಾಲಾಕ್ ಸೇರಿ ವಿವಿಧ ಸೊಪ್ಪುಗಳಲ್ಲಿಯೂ ಕಬ್ಬಿಣದ ಅಂಶ ಹೆಚ್ಚಿರುತ್ತದೆ.
ಆದರೆ ಸೊಪ್ಪನ್ನು ನೇರವಾಗಿ ಸೇವಿಸಲು ಸಾಧ್ಯವಿಲ್ಲ. ಬೇಯಿಸಿದ ಬಳಿಕ ಹಲವು ಪೌಷ್ಟಿಕಾಂಶಗಳು ನಷ್ಟವಾಗುವ ಕಾರಣ, ನೇರವಾಗಿ ತಿನ್ನಬಹುದಾದ ದಾಳಿಂಬೆ ಅತಿ ಸೂಕ್ತವಾಗಿದೆ. ದಾಳಿಂಬೆ ಹಣ್ಣು ವಿವಿಧ ಔಷಧೀಯ ಗುಣಗಳ ಜೊತೆಗೆ ಉತ್ತಮ ಆರೋಗ್ಯ ವೃದ್ಧಿಗೂ ಕೂಡ ಸಹಕಾರಿ. ಇದನ್ನು ನೇರವಾಗಿ ತಿನ್ನುವುದರ ಜೊತೆ ಇದರ ಕಾಳುಗಳಿಂದ ಜ್ಯೂಸ್ ಮಾಡಿ ಸಹ ಸೇವಿಸಬಹುದಾಗಿದೆ.



