ಅರಿಶಿನ ಮತ್ತು ಶುಂಠಿಯು ಏಷ್ಯಾ ಮೂಲದ ಜನಪ್ರಿಯ ಮಸಾಲೆಗಳು ಮತ್ತು ಶತ-ಶತಮಾನಗಳಿಂದ ಭಾರತ ಮತ್ತು ಚೀನಾದಲ್ಲಿ ಸಾಂಪ್ರದಾಯಿಕವಾಗಿ ಬಳಸುತ್ತಿರುವ ಔಷಧೀಯ ಸಸ್ಯಗಳು. ಆಯುರ್ವೇದದಲ್ಲಂತೂ ಇದರ ಬಳಕೆ ಬಹಳ ಸಾಮಾನ್ಯ. ಅರಿಶಿಣವನ್ನು ಶೀತ, ಅಜೀರ್ಣದ ಸಮಸ್ಯೆಗಳು,
ಚರ್ಮ ಮತ್ತು ಮೇಲ್ಭಾಗದ ಶ್ವಾಸೇಂದ್ರಿಯದ ತೊಂದರೆ, ಉರಿಯೂತದಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಬಳಸಲಾಗುತ್ತದೆ. ಇನ್ನು ಶುಂಠಿಯನ್ನು ಜೀರ್ಣ ಕ್ರಿಯೆಯನ್ನ ಉತ್ತಮಗೊಳಿಸಲು ಹಾಗೂ ವಾಕರಿಕೆ ಮತ್ತು ನೋವನ್ನು ನಿವಾರಿಸಲು, ಹಾಗೂ ಪ್ರತಿರಕ್ಷಣಾ ಗುಣಗಳಿಗಾಗಿ ಉಪಯೋಗಿಸುತ್ತಾರೆ.
ಈ ಎರಡು ಮಸಾಲೆಗಳು ವಾಕರಿಕೆಗೆ ಪರಿಹಾರ ನೀಡುವುದರಿಂದ ಹಿಡಿದು ರೋಗನಿರೋಧಕ ಶಕ್ತಿಯ ವರ್ಧನೆಯವರೆಗೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಉರಿಯೂತ ನಿವಾರಕವಾಗಿದೆ:
ಅರಿಶಿನ ಮತ್ತು ಶುಂಠಿ ಎರಡೂ ಪ್ರಬಲ ಉರಿಯೂತ ನಿವಾರಣಾ ಗುಣಲಕ್ಷಣಗಳನ್ನು ಹೊಂದಿದ್ದು, ಅರಿಶಿನದಲ್ಲಿರುವ ಕರ್ಕ್ಯುಮಿನ್ ಮತ್ತು ಶುಂಠಿಯಲ್ಲಿ ಕಂಡುಬರುವ ಜಿಂಜರಾಲ್ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಸಂಧಿವಾತ ಮತ್ತು ಕರುಳಿನ ಉರಿಯೂತವನ್ನು ನಿವಾರಿಸುತ್ತದೆ.
ನೋವು ನಿವಾರಕ:
ಇವು ನೈಸರ್ಗಿಕ ನೋವು ನಿವಾರಕವಾಗಿದೆ. ಈ ಸಂಯುಕ್ತಗಳು ಆಸ್ಟಿಯೋ ಆರ್ಥ್ರೈಟಿಸ್, ರುಮಟಾಯ್ಡ್ ಸಂಧಿವಾತ ಮತ್ತು ಸ್ನಾಯು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತದೆ.
ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ:
ಶುಂಠಿ ಮತ್ತು ಅರಿಶಿನವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅರಿಶಿನವು ಅಜೀರ್ಣ ಮತ್ತು ಉಬ್ಬರದ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ಅರಿಶಿನ ಮತ್ತು ಶುಂಠಿ ಎರಡೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಲಕ್ಷಣಗಳನ್ನು ಹೊಂದಿದ್ದು ಸೋಂಕುಗಳು ಮತ್ತು ಕಾಯಿಲೆಗಳ ವಿರುದ್ಧ ದೇಹವನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.
ಹೃದಯರಕ್ತನಾಳದ ಆರೋಗ್ಯ ಕಾಪಾಡುತ್ತದೆ:
ಅರಿಶಿನ ಮತ್ತು ಶುಂಠಿಯು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಹೃದಯರಕ್ತನಾಳದ ಆರೋಗ್ಯಕ್ಕೆ ಒಳ್ಳೆಯದು ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಹೃದ್ರೋಗಕ್ಕೆ ಅಪಾಯಕಾರಿ ಅಂಶಗಳಾದ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತವೆ. ಹೆಚ್ಚುವರಿಯಾಗಿ, ಶುಂಠಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ ರಕ್ತ ಪರಿಚಲನೆಯನ್ನು ಸುಧಾರಿತ್ತದೆ.
ಮೆದುಳಿನ ಆರೋಗ್ಯ:
ಇವೆರಡು ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಯಸ್ಸಿಗೆ ಸಂಬಂಧಿಸಿದ ಅರಿವಿನ ಸಾಮರ್ಥ್ಯ ಕಡಿಮೆಯಾಗದಿರಲು, ಮೆದುಳಿನಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಮನಸ್ಥಿತಿ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.