ನಿಮ್ಮ ಮೊಬೈಲ್​ ಬಿಸಿಯಾಗಲು ಕಾರಣವೇನು ಗೊತ್ತಾ? ಇದರಿಂದ ಫೋನ್​ ರಕ್ಷಿಸಲು ಹೀಗೆ ಮಾಡಿ!

0
Spread the love

ಪ್ರಸ್ತುತ ದಿನಗಳಲ್ಲಿ ಫೋನ್ ಇಲ್ಲದೇ ಯಾವುದೇ ಕೆಲಸಗಳು ಆಗುವುದೇ ಇಲ್ಲ. ಪ್ರತಿಯೊಂದಕ್ಕೂ ಫೋನ್ ಬೇಕೇ ಬೇಕು. ಎಷ್ಟು ಜನರು ತಮ್ಮ ಕೆಲಸಗಳನ್ನು ಫೋನ್ ಮೂಲಕವೇ ಮಾಡಿಕೊಳ್ಳುತ್ತಾರೆ ಆನ್ಲೈನ್ ಶಾಪಿಂಗ್ ನಿಂದ ಹಿಡಿದು, ತಮ್ಮ ಕೆಲಸಗಳಿಗೆ ಅರ್ಜಿ ಹಾಕುವವರೆಗೂ ಫೋನ್ಗಳನ್ನು ಅನೇಕ ಜನರು ಬಳಸುತ್ತಾರೆ.

Advertisement

ಈಗಿನ ಟೆಕ್ ಯುಗದಲ್ಲಿ ಸ್ಮಾರ್ಟ್ ಫೋನುಗಳಿಗೆ ಎಲ್ಲಿಲ್ಲದ ಬೇಡಿಕೆ. ಕಡಿಮೆ ಬೆಲೆಗೆ ಆಕರ್ಷಕ ಫೀಚರ್ ಹೊಂದಿರುವ ಮೊಬೈಲ್ ಬಿಡುಗಡೆ ಆಗುತ್ತಾ ಇರುತ್ತದೆ. ಇವುಗಳಲ್ಲಿ ಕೆಲವು ಸ್ಮಾರ್ಟ್ ಫೋನ್ ಹೆಚ್ಚಿನ ರೇಡಿಯೇಷನ್ ಕೂಡ ಹೊಂದಿರುತ್ತವೆ. ಕೆಲವೊಮ್ಮೆ ಸ್ಮಾರ್ಟ್ ಫೋನ್ ಅಧಿಕ ಬಿಸಿ ಆಗಿ ಬಿಡುತ್ತದೆ. ಇದರಿಂದ ಮೊಬೈಲ್ ಹ್ಯಾಂಗ್ ಆಗುವುದು, ಸ್ವಿಚ್ ಆಫ್ ಆಗುವುದು ಕೊನೆಗೆ ಬ್ಲಾಸ್ಟ್ ಆಗುವಂತಹ ತೊಂದರೆಗಳು ಕೂಡ ಎದುರಾಗುತ್ತದೆ.

ಇನ್ನೂ ನಾವು ಬಳಸುವ ಮೊಬೈಲ್​ ಫೋನ್​ಗಳು ಆಗೊಮ್ಮೆ, ಈಗೊಮ್ಮೆ ಬಿಸಿಯಾಗುತ್ತಿರುತ್ತವೆ. ಒಮ್ಮೆ ಏನಾದರೂ ಬಿಸಿಯಾದರೆ ಅದು ದೊಡ್ಡ ವಿಷಯವಲ್ಲ. ಆದರೆ, ಪ್ರತಿದಿನವೂ ​ಬಿಸಿಯಾಗುತ್ತಿದ್ದರೆ ನಿಮ್ಮ ಫೋನ್‌ನಲ್ಲಿ ಸಮಸ್ಯೆ ಇದೆ ಎಂದೇ ಅರ್ಥ. ಸಾಮಾನ್ಯವಾಗಿ ಬ್ಯಾಟರಿಯ ಇತರ ಸಮಸ್ಯೆಗಳಿಂದ ಫೋನ್ ಬಿಸಿಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನೀವು ತಕ್ಷಣ ಎಚ್ಚೆತ್ತುಗೊಳ್ಳಬೇಕು.

ನಿತ್ಯವೂ ಫೋನ್ ಬಿಸಿಯಾಗುತ್ತಿದ್ದರೂ ಎಚ್ಚರಿಕೆ ವಹಿಸದಿದ್ದರೆ ಕೆಲಕಾಲ ಫೋನ್ ಕೆಲಸ ಮಾಡುವ ವೇಗ ಕಡಿಮೆಯಾಗುತ್ತದೆ. ಅಲ್ಲದೇ ಫೋನ್ ವರ್ಕ್​ ಆಗುವುದೇ ನಿಲ್ಲಿಸುತ್ತದೆ. ಆದ್ದರಿಂದ ಮುಂಚಿತವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ನಿಮ್ಮ ಮೊಬೈಲ್ ​ಅನ್ನು ರಕ್ಷಿಸಬಹುದು ಮತ್ತು ಹಣವನ್ನೂ ಉಳಿತಾಯ ಮಾಡಬಹುದು. ಅತಿಯಾಗಿ ಬಿಸಿಯಾಗುವುದನ್ನು ತಡೆಯುವ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಫೋನ್ ವೇಗವಾಗಿ ಕಾರ್ಯನಿರ್ವಹಿಸುವಂತೆಯೂ ಮಾಡಬಹುದು.

ಫೋನ್ ಬಿಸಿಯಾಗಲು ಕಾರಣಗಳು:ಮೊಬೈಲ್​ ಫೋನ್ ಬಿಸಿಯಾಗಲು ಹಲವು ಕಾರಣಗಳಿವೆ. ಫೋನ್​ಅನ್ನು ಬಿಸಿಲಿನಲ್ಲಿ ಅಥವಾ ಬಿಸಿಯಾದ ಸ್ಥಳಗಳಲ್ಲಿ ದೀರ್ಘಕಾಲದವರೆಗೆ ಇಡುವುದು. ಚಾರ್ಜ್ ಮಾಡುವಾಗಲೂ ಸುಮಾರು ಹೊತ್ತು ಹಾಗೆ ಮೊಬೈಲ್​ ಬಳಸುವುದು. ಇದರ ಜೊತೆಗೆ ಬ್ಯಾಟರಿ ಅಥವಾ ಚಾರ್ಜರ್ ಸಮಸ್ಯೆ, ಫೋನ್ ಸಾಫ್ಟ್‌ವೇರ್‌ನಲ್ಲಿನ ದೋಷಗಳಿಂದಾಗಿ ಫೋನ್‌ಗಳು ಹೆಚ್ಚು ಬಿಸಿಯಾಗುತ್ತವೆ. ಕೆಲಸ ಮಾಡದ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡುವಂತಹ ಕಾರಣಗಳಿಂದ ಸಾಮಾನ್ಯವಾಗಿ ಫೋನ್‌ಗಳು ಹೆಚ್ಚು ಬಿಸಿಯಾಗುತ್ತವೆ.

ಯಾವ ರೀತಿಯ ಸಮಸ್ಯೆ ಉದ್ಭವಿಸುತ್ತದೆ?:ಮೊಬೈಲ್​ ಫೋನ್ ಬಿಸಿ ಆಗುವುದರಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಫೋನ್ ಚಾರ್ಜಿಂಗ್ ತ್ವರಿತವಾಗಿ ಕಡಿಮೆಯಾಗುತ್ತದೆ ಅಥವಾ ಚಾರ್ಜಿಂಗ್ ನಿಲ್ಲುತ್ತದೆ. ಫೋನ್ ಸಿಗ್ನಲ್ ದುರ್ಬಲಗೊಳ್ಳುತ್ತದೆ. ಇದು ಫೋನ್‌ನ ಬ್ಯಾಟರಿ, ಸಿಮ್ ಕಾರ್ಡ್ ಮತ್ತು ಇತರ ನಿರ್ಣಾಯಕ ಉಪಕರಣಗಳನ್ನು ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ತಡೆಯುತ್ತದೆ. ಅಲ್ಲದೆ ಫೋನ್ ಬಿಸಿಯಾಗುವುದರಿಂದ ಕ್ಯಾಮರಾ ಫ್ಲ್ಯಾಶ್ ಲೈಟ್ ಕೆಲಸ ಮಾಡುವುದಿಲ್ಲ.

ಫೋನ್ ಬಿಸಿಯಾಗದಂತೆ ರಕ್ಷಿಸುವುದು ಹೇಗೆ?:ಮೊಬೈಲ್​ ಬಿಸಿಯಾಗದಂತೆ ತಡೆಯುವ ಸುಲಭ ಮಾರ್ಗಗಳು ಇವೆ. ಸೂರ್ಯನ ಬೆಳಕು ನೇರವಾಗಿ ಫೋನ್ ಮೇಲೆ ಬೀಳದಂತೆ ನೋಡಿಕೊಳ್ಳಬೇಕು. ಫೋನ್ ಅನ್ನು ತಂಪಾದ ಸ್ಥಳಗಳಲ್ಲಿ ಇರಿಸಬೇಕು. ಬಿಸಿಲಿನಲ್ಲಿ ನಿಲ್ಲಿಸಿದ ಕಾರಿನಲ್ಲಿ ಫೋನ್ ಇಡುವುದು ತಪ್ಪಿಸಬೇಕು. ಇಲ್ಲವೇ, ಡ್ಯಾಶ್‌ಬೋರ್ಡ್ ಇತ್ಯಾದಿಗಳ ಅಡಿಯಲ್ಲಿ ಇಡುವುದರಿಂದ ಫೋನ್ ನೇರ ಸೂರ್ಯನ ಬೆಳಕಿನಿಂದ ಸುರಕ್ಷಿತವಾಗಿರುತ್ತದೆ.

ಜೊತೆಗೆ ಬಿಸಿಯಾದ ಜಾಗದಲ್ಲೂ ಫೋನ್ ಇಡಬೇಡಿ. ವಿಶೇಷವಾಗಿ ಅಡುಗೆ ಮನೆಯಂತಹ ಪ್ರದೇಶಗಳಲ್ಲಿ ಫೋನ್ ಯಾವುದೇ ಕಾರಣಕ್ಕೆ ಇಡಬೇಡಿ. ಅಂತಹ ಸ್ಥಳಗಳಲ್ಲಿ ಫೋನ್ ಅನ್ನು ಆಗಾಗ್ಗೆ ಇಡುವುದರಿಂದ ಫೋನ್ ಬಿಸಿಯಾಗಲು ಕಾರಣವಾಗುತ್ತದೆ. ಇದರಿಂದ ಫೋನ್ ಹಾಳಾಗುತ್ತದೆ. ಚಾರ್ಜ್ ಮಾಡುವಾಗ ಸಹ ಫೋನ್ ಬಳಸುವ ಅಭ್ಯಾಸ ಅನೇಕರಿಗೆ ಇರುತ್ತದೆ. ಚಾರ್ಜ್ ಮಾಡುವಾಗ ಫೋನ್ ಬಳಸುವುದರಿಂದ ಅದು ಬಿಸಿಯಾಗುತ್ತದೆ. ಹೀಗಾಗಿ ಇದನ್ನೂ ಆದಷ್ಟು ತಪ್ಪಿಸಬೇಕು. ಅಷ್ಟೇ ಅಲ್ಲ, ಫೋನ್ ಚಾರ್ಜ್ ಆಗುತ್ತಿರುವಾಗ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಹಾಗೂ ಹೈ-ಗ್ರಾಫಿಕ್ಸ್ ವೀಡಿಯೊ ಗೇಮ್‌ಗಳನ್ನು ಆಡಬೇಡಿ.

ಫೋನ್ ಅತಿಯಾಗಿ ಬಿಸಿಯಾಗುವುದನ್ನು ತಪ್ಪಿಸಲು ನಿಮ್ಮ ಫೋನ್ ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್‌ಗಳನ್ನು ಅಪ್​ಡೇಟ್​ ಮಾಡಿ. ವಾಸ್ತವವಾಗಿ ನಿಮ್ಮ ಫೋನ್ ಸಾಫ್ಟ್‌ವೇರ್‌ನಲ್ಲಿನ ದೋಷಗಳು ಫೋನ್ ಅತಿಯಾಗಿ ಬಿಸಿಯಾಗಲು ಕಾರಣವಾಗಬಹುದು. ಅದಕ್ಕಾಗಿಯೇ ಸಾಫ್ಟ್‌ವೇರ್​ಅನ್ನು ಯಾವಾಗಲೂ ನವೀಕರಿಸಬೇಕು.


Spread the love

LEAVE A REPLY

Please enter your comment!
Please enter your name here