ಬೆಂಗಳೂರು: ಖಾಸಗಿ ಆಸ್ಪತ್ರೆಯ ಮಹಿಳಾ ವೈದ್ಯೆಯ ಮೇಲೆ ಅಸಭ್ಯ ವರ್ತನೆ ತೋರಲು ಯತ್ನಿಸಿದ ಆರೋಪಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ರಾಕೇಶ್(21) ಬಂಧಿತ ಆರೋಪಿಯಾಗಿದ್ದು, ಡಿಸೆಂಬರ್ 17ರಂದು ಬೆಳಗಿನ ಜಾವ, ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ವೈದ್ಯೆಯ ಬಳಿ ಆರೋಪಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದನು.
ವೈದ್ಯೆ ತನ್ನ ಪಿಜಿ ಮುಂಭಾಗದಲ್ಲೇ ಎದುರಾಗಿದ್ದ ರಾಕೇಶ್ ಬಸ್ ನಿಲ್ದಾಣ ವಿಳಾಸ ಕೇಳಿದ್ದನು. ಭಯದಿಂದ ವೈದ್ಯೆ ವಿಳಾಸವನ್ನು ಹೇಳಿ ಗೇಟ್ ತೆರೆಯಲು ಮುಂದಾಗುತ್ತಿದ್ದಾಗ, ಆರೋಪಿ ಬೈಕ್ ನಿಲ್ಲಿಸಿ ಹತ್ತಿರ ಬಂದಿದ್ದನು. ಆಕೆಯ ದೇಹವನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾಗ, ವೈದ್ಯೆ ಕಿರುಚಿದ ವೇಳೆ ಆರೋಪಿ ಬೈಕ್ನಲ್ಲಿ ಎಸ್ಕೇಪ್ ಆಗಿದ್ದನು. ಕಳೆದ 20 ದಿನಗಳ ಹಿಂದೆ ಘಟನೆ ನಡೆದಿದ್ದು, ಬೀದಿ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ವಾಯವ್ಯ ವಿಭಾಗ ಡಿಸಿಪಿ ನಾಗೇಶ್ ಮಾತನಾಡಿ, ಪ್ರಕರಣ ಸಂಬಂಧ ಆರೋಪಿ ರಾಕೇಶ್ನನ್ನು ಬಂಧಿಸಲಾಗಿದೆ. ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನದಲ್ಲಿ ಬಂದಿದ್ದ. ವಿಳಾಸ ಕೇಳುವ ನೆಪದಲ್ಲಿ ವೈದ್ಯೆ ಜೊತೆ ಅನುಚಿತ ವರ್ತನೆ ತೋರಿದ್ದ.
ತಡರಾತ್ರಿ ಡ್ಯೂಟಿ ಮುಗಿಸಿ ಆಟೋದಲ್ಲಿ ವೈದ್ಯೆ ಪಿಜಿಗೆ ಮರಳುತ್ತಿದ್ದರು. ಈ ವೇಳೆ ಆಕೆ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಆರೋಪಿ ರಾಕೇಶ್ 21 ವರ್ಷದ ಯುವಕ. ಯಾವುದೇ ಕೆಲಸ ಮಾಡುತ್ತಿರಲಿಲ್ಲ. ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಾನೆ. ಮೂಲತಃ ತುಮಕೂರು ಜಿಲ್ಲೆಯವನು. ಆರೋಪಿ ರಾಕೇಶ್ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.



