ಸಿಪಿಐಗೆ ಮನವಿ ಸಲ್ಲಿಸಿದ ಮುಖಂಡರು….
ರೋಣ: ಮರಳು ದಂಧೆಯ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕಿನ ಹಿರೇಹಾಳ ಗ್ರಾಮದ ವೈದ್ಯ, ಕಾಂಗ್ರೆಸ್ ಮುಖಂಡ ಡಾ.ಶಶಿಧರ ಹಟ್ಟಿ ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದರು. ಈ ಹಿನ್ನೆಲೆಯಲ್ಲಿ ರೋಣ, ಗಜೇಂದ್ರಗಡ ತಾಲೂಕಿನ ಹಾಲುಮತ ಸಮಾಜದ ಮುಖಂಡರು ಬುಧವಾರ ರಾತ್ರಿ ಸಿಪಿಐ ಎಸ್.ಎಸ್. ಬಳಗಿಯವರಿಗೆ ಮನವಿ ಸಲ್ಲಿಸಿ, ಆರೋಪಿಯನ್ನು ಶೀಘ್ರ ಬಂಧಿಸಬೇಕು ಎಂದು ಮನವಿ ಸಲ್ಲಿಸಿದರು.
ತಾಲೂಕಾಧ್ಯಕ್ಷ ಬಸವರಾಜ ಜಗ್ಗಲ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡಿರುವ ವೈದ್ಯ ಶಶಿಧರ ಹಟ್ಟಿಯವರು ಡೆತ್‌ನೋಟ್‌ನಲ್ಲಿ ಆರೋಪಿತನ ಹೆಸರು ಬರೆದಿದ್ದಾರೆ. ಅವರ ಪತ್ನಿ ಕೂಡ ಶರಣಗೌಡ ಪಾಟೀಲರ ವಿರುದ್ಧ ದೂರು ನೀಡಿದ್ದಾರೆ. ಆರೋಪಿಯನ್ನು ಕೂಡಲೇ ಬಂಧಿಸುವ ಮೂಲಕ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ವಿನಂತಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಿಪಿಐ ಎಸ್.ಎಸ್. ಬಿಳಗಿ, ಆರೋಪಿಯನ್ನು ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು. ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿದಿಲ್ಲ ಎಂದರು.
ಗಜೇಂದ್ರಗಡ ತಾಲೂಕಾಧ್ಯಕ್ಷ ಅಂದಪ್ಪ ಬಿಚ್ಚೂರ, ಮುತ್ತಣ್ಣ ಕೊಪ್ಪಳ, ಅಶೋಕ ಕೊಪ್ಪದ, ಬಸವರಾಜ ಯರಗೊಪ್ಪ, ಮಲ್ಲಿಕಾರ್ಜುನ ಬೇವಿನಮರದ, ಈಶಪ್ಪ ಜಗ್ಗಲ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.