HomeGadag Newsಅನಾಥ ಸ್ಥಿತಿಯಲ್ಲಿ ದೊಡ್ಡಮೇಟಿ ಸಮಾಧಿ

ಅನಾಥ ಸ್ಥಿತಿಯಲ್ಲಿ ದೊಡ್ಡಮೇಟಿ ಸಮಾಧಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಅಂದಿನ ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣಗೊಂಡು 50 ವಸಂತಗಳು ಗತಿಸಿದವು. ಕರ್ನಾಟಕ ರಾಜ್ಯದ ಏಕೀಕರಣಕ್ಕಾಗಿ ದುಡಿದ ಮುಂಚೂಣಿ ನಾಯಕರೆಂದರೆ ಜಕ್ಕಲಿಯ ಅಂದಾನಪ್ಪ ದೊಡ್ಡಮೇಟಿಯವರು. ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಅವರು ಗಾಂಧೀಜಿ, ನೆಹರೂವರನ್ನು ತಮ್ಮ ಗ್ರಾಮ ಜಕ್ಕಲಿಗೆ ಕರೆತಂದ ಧೀಮಂತ ನಾಯಕರು. ಅವರ ಸಮಾಧಿ ಅವರ ಜಮೀನಿನಲ್ಲಿಯೇ ಇದ್ದು, ಅನಾಥ ಸ್ಥಿತಿಯಲ್ಲಿರುವುದನ್ನು ನೋಡಲು ಕನ್ನಡಿಗರಿಗೆ ತೀವ್ರ ಕಸಿವಿಸಿಯಾಗುತ್ತಿದೆ.

ದೊಡ್ಡಮೇಟಿಯವರ ಸಮಾಧಿ ಸ್ಥಳವನ್ನು ಸ್ಮಾರಕವನ್ನಾಗಿಸಲು ಘೋಷಿಸಿ ಒಂದು ವರ್ಷವೇ ಕಳೆಯಿತು. ಅಲ್ಲಿಂದ ಇಲ್ಲಿಯವರೆಗೆ ಸಭೆಗಳಾದವೇ ಹೊರತು ಕಾರ್ಯ ಪ್ರಗತಿ ಕಾಣದಿರುವುದು ಅಧಿಕಾರಿಗಳ, ಜನಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಇದೇ ದಕ್ಷಿಣ ಕರ್ನಾಟಕದಲ್ಲಾಗಿದ್ದರೆ ಇಷ್ಟೊತ್ತಿಗಾಗಲೇ ಸ್ಮಾರಕ ನಿರ್ಮಾಣಗೊಂಡು ಸಾರ್ವಜನಿಕರ ದರ್ಶನಕ್ಕೆ ಸಿದ್ಧವಾಗಿರುತ್ತಿತ್ತು ಎಂಬುದು ಉತ್ತರ ಕರ್ನಾಟಕದ ಕನ್ನಡಿಗರ ಅನಿಸಿಕೆ.

Doddameti Samadhi in an orphan state

ದೊಡ್ಡಮೇಟಿ ಅಂದಾನಪ್ಪ ಬಳ್ಳಾರಿ ಜಿಲ್ಲೆ ಕರ್ನಾಟಕದಲ್ಲಿ ಉಳಿಯುವಂತೆ ಮಾಡಿದ ಕನ್ನಡದ ಪುತ್ರ. ಕಾಯಾ ವಾಚಾ ಮನಸಾ, ತನು, ಮನ, ಧನದಿಂದ ಕರ್ನಾಟಕ ಏಕೀಕರಣಕ್ಕೆ ದುಡಿದು ಮಡಿದ ಕನ್ನಡಾಂಬೆಯ ವರಪುತ್ರ. ಅಂದಾನಪ್ಪನವರು ಗತಿಸಿ 52 ವರ್ಷಗಳು ಕಳೆದರೂ ಅವರಿಗೊಂದು ಸ್ಮಾರಕ ನಿರ್ಮಾಣ ಮಾಡದಂತಹ ಹೀನಾಯ ಸ್ಥಿತಿಯಲ್ಲಿ ನಾವಿದ್ದೇವೆ ಎಂಬುದು ನಾಚಿಕೆಗೇಡಿನ ವಿಷಯ.

ಈ ಭಾಗದ ಮಠಾಧೀಶರು, ಕನ್ನಡಪರ ಹೋರಾಟಗಾರರು, ಸಾಹಿತಿಗಳು, ಬರಹಗಾರರು ಸೇರಿದಂತೆ ಕನ್ನಡಾಭಿಮಾನಿಗಳು ಸಮಾಧಿಯನ್ನು ಸ್ಮಾರಕವನ್ನಾಗಿಸುವಂತೆ ಸಾಕಷ್ಟು ಹೋರಾಟ, ಜಾಥಾ, ಪಾದಯಾತ್ರೆ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ಒತ್ತಾಯ ಮಾಡುತ್ತ ಬಂದಿದ್ದರು. ಅದರ ಫಲವಾಗಿ ಕಳೆದ ವರ್ಷ ರಾಜ್ಯ ಸರ್ಕಾರವು ದಿ. ಅಂದಾನಪ್ಪನವರ ಸಮಾಧಿಯನ್ನು ಸ್ಮಾರಕವನ್ನಾಗಿಸಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದು ಈ ಭಾಗದ ಜನರ ಸಂತಸಕ್ಕೆ ಕಾರಣವಾಗಿತ್ತು. ಆದರೆ, ಘೋಷಣೆಯಾಗಿ ಒಂದು ವರ್ಷ ಕಳೆದರೂ ಕಾಮಗಾರಿ ಪ್ರಾರಂಭವಾಗದಿರುವುದು ನಿರಾಸೆ ಮೂಡಿಸಿದೆ.

Doddameti Samadhi in an orphan state

ಅಂದಾನಪ್ಪನವರ ಸ್ಮಾರಕ ನಿರ್ಮಾಣಕ್ಕೆ ಬೇಕಾದ ಅಗತ್ಯ ದಾಖಲಾತಿಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈಗಾಗಲೇ ಸ್ಮಾರಕ ಭವನ ನಿರ್ಮಾಣದ ರೂಪರೇಷೆಗಳು ಸಿದ್ಧವಾಗಿವೆ. ಮುಖ್ಯಮಂತ್ರಿಗಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಭೇಟಿಯಾಗಿ ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡಿಸಲಾಗುತ್ತದೆ.
– ಜಿ.ಎಸ್. ಪಾಟೀಲ.
ಶಾಸಕರು, ರೋಣ.

ದೊಡ್ಡಮೇಟಿಯವರ ಸ್ಮಾರಕ ನಿರ್ಮಾಣಕ್ಕಾಗಿ ಈಗಾಗಲೇ 1.23 ಎಕರೆ ಜಮೀನನ್ನು ದಾನದ ರೂಪವಾಗಿ ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಲಾಗಿದೆ. ಅಂದಾಜು ರೂ.9.95 ಕೋಟಿಗಳ ಕ್ರಿಯಾ ಯೋಜನೆ ಸಿದ್ಧವಾಗಿದೆ. ಸರಕಾರದಿಂದ ಅನುದಾನ ಬಂದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುತ್ತದೆ.
– ವೀರಯ್ಯಸ್ವಾಮಿ.
ಜಿಲ್ಲಾ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

ಅಂದಾನಪ್ಪನವರು ಜೀವನದುದ್ದಕ್ಕೂ ಕರ್ನಾಟಕದ ಅಭಿವೃದ್ಧಿಯನ್ನೇ ಉಸಿರಾಗಿಸಿಕೊಂಡಿದ್ದರು. ಅವರ ಸ್ಮಾರಕ ಭವನ ನಿರ್ಮಾಣಕ್ಕೆ ಗ್ರಹಣ ಹಿಡಿದಿರುವುದು ನಿರಾಸೆಯಾಗಿದೆ. ಈಗಲಾದರೂ, ರಾಜ್ಯ ಸರ್ಕಾರ ಸ್ಮಾರಕ ಭವನದ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಲು ಮುಂದಾಗಬೇಕು ಎನ್ನುತ್ತಾರೆ ಮಾಜಿ ಯೋಧ ಎಂ.ಎಸ್. ಮಲ್ಲನಗೌಡರ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!