ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಈ ದೇಶದ ಹಿಂದುಳಿದ ವರ್ಗಗಳ ಬಗ್ಗೆ, ಪರಿಶಿಷ್ಟ ಜಾತಿ, ಪಂಗಡಗಳ ಬಗ್ಗೆ, ಅಲ್ಪಸಂಖ್ಯಾತರ ಕುರಿತು ಪ್ರಾಮಾಣಿಕ ಕಾಳಜಿ ಇದೆಯೇ ಎಂದು ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಪ್ರಶ್ನಿಸಲು ಬಯಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ತಮ್ಮನ್ನು ತಾವು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಕರೆದುಕೊಳ್ಳುತ್ತಾರೆ. ಅಹಿಂದ ಚಾಂಪಿಯನ್ ಎಂದು ಕರೆದುಕೊಳ್ಳುತ್ತಾರೆ.
ಇತ್ತೀಚೆಗೆ ಕಾಂತರಾಜು ವರದಿಯನ್ನು ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸುವುದಾಗಿ ಬೊಗಳೆ ಹೊಡೆಯತ್ತಿದ್ದೀರಲ್ಲವೇ? ದೆಹಲಿಯಿಂದ ದೂರವಾಣಿ ಕರೆ ಬಂದ ನಂತರ, ರಾಹುಲ್ ಗಾಂಧಿಯವರು ಆದೇಶ ಮಾಡಿದ್ದಾರೆಂದು 165 ಕೋಟಿ ಖರ್ಚು ಮಾಡಿ ಸಿದ್ಧಪಡಿಸಿದ್ದ ಕಾಂತರಾಜು ವರದಿಯನ್ನು ಕಸದ ಬುಟ್ಟಿಗೆ ಹಾಕಿದ್ದೀರಲ್ಲವೇ? ಆಗ ನಿಮ್ಮ ಹಿಂದುಳಿದವರ ಕಾಳಜಿ ಎಲ್ಲಿ ಹೋಗಿತ್ತು ಎಂದು ಕೇಳಿದರು.
ನಿನ್ನೆ ಬೆಂಗಳೂರಿನಲ್ಲಿ ಎಐಸಿಸಿಯ ಒಬಿಸಿ ಸಮಿತಿ ಸಭೆ ನಡೆದಿದೆ. ಇದು ದೇಶಾದ್ಯಂತ ಸುದ್ದಿಯಾಗಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿ, ದೇಶದಲ್ಲಿ ಸಾಮಾಜಿಕ ನ್ಯಾಯದ ಆಂದೋಲನವನ್ನು ಮುನ್ನಡೆಸುವ ಜವಾಬ್ದಾರಿ ಈ ಸಮಿತಿಗೆ ಇದೆ,
ದೀರ್ಘ ಕಾಲದಿಂದ ಅಧಿಕಾರ, ಅವಕಾಶ ಮತ್ತು ಘನತೆಯಿಂದ ವಂಚಿತವಾದ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಏಳಿಗೆ ಆಗದೆ ದೇಶದ ಅಭಿವೃದ್ಧಿ ಸಾಧ್ಯವಾಗದು ಎಂದಿದ್ದಾಗಿ ಗಮನಕ್ಕೆ ತಂದರು. ಬಿಜೆಪಿ ತನ್ನ ಹುಟ್ಟಿನಿಂದಲೇ ಸಾಮಾಜಿಕ ನ್ಯಾಯದ ವಿರೋಧಿ; ಮೀಸಲಾತಿ ಪರವಾಗಿ ಬಿಜೆಪಿ ಇರಲಿಲ್ಲ ಎಂಬ ಆರೋಪವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ ಎಂದು ಆಕ್ಷೇಪಿಸಿದರು.