ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೆರೆಯ ಸವಣೂರ, ಶಿಗ್ಗಾಂವ, ಕುಂದಗೋಳ, ಶಿರಹಟ್ಟಿ ತಾಲೂಕಿನಿಂದ ನಿತ್ಯ ನೂರಾರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಅಪಘಾತ, ಹೆರಿಗೆ ಮತ್ತು ಅಗತ್ಯ ಸಂದರ್ಭಗಳಲ್ಲಿ ಹುಬ್ಬಳ್ಳಿ, ಗದುಗಿಗೆ ಹೋಗಲೇಬೇಕಾದ ಅನಿವಾರ್ಯತೆ ಇತ್ತು. ಅಲ್ಲದೇ ಖಾಸಗಿ ಆಸತ್ರೆಗಳಲ್ಲಿ ಚಿಕಿತ್ಸೆಗೊಳಪಡುವ ರೋಗಿಗಳಿಗೆ ಈ ಬ್ಲಡ್ ಬ್ಯಾಂಕ್‌ನಿಂದ ಸಾಕಷ್ಟು ಉಪಯೋಗವಾಗಲಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ರಕ್ತ ಸಂಗ್ರಹಣಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತ ಸಂಗ್ರಹಣಾ ಘಟಕದ ಬೇಡಿಕೆ ಹತ್ತಾರು ವರ್ಷಗಳದ್ದಾಗಿದೆ. ಇದೀಗ ಘಟಕ ಕಾರ್ಯಾರಂಭಗೊಂಡಿದ್ದು, ಈ ಭಾಗದ ಯುವಕ ಮತ್ತು ಕನ್ನಡಪರ ಸಂಘಟನೆಗಳಿಂದ ಆಗಾಗ ರಕ್ತದಾನದ ಶಿಬಿರಗಳು ನಡೆಯಬೇಕು. ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು. ಅಂದಾಗ ಮಾತ್ರ ಜಿಮ್ಸ್ನಿಂದ ಲಕ್ಷ್ಮೇಶ್ವರದ ರಕ್ತ ಸಂಗ್ರಹಣಾ ಘಟಕಕ್ಕೆ ಅಗತ್ಯ ಸಂದರ್ಭದಲ್ಲಿ ರಕ್ತ ಕಳುಹಿಸಿಕೊಡುತ್ತಾರೆ ಎಂದರು.
ಈ ವೇಳೆ ಗದಗ ಜಿಲ್ಲಾ ರಕ್ತ ಸಂರಕ್ಷಣಾ ಅಧಿಕಾರಿ (ಡಿಟಿಓ) ಆರುಂಧತಿ ಕುಲಕರ್ಣಿ ರಕ್ತದಾನದ ಮಹತ್ವ ಮತ್ತು ಮಹಿಳೆಯರ ಆರೋಗ್ಯಕರ ಜೀವನದ ಬಗ್ಗೆ ಮಾತನಾಡಿದರು. ತಾಲೂಕಾ ವೈದ್ಯಾಧಿಕಾರಿ (ಟಿಹೆಚ್‌ಓ) ಡಾ. ಸುಭಾಸ ದಾಯಗೊಂಡ ಬ್ಲಡ್ ಸ್ಟೋರೇಜ್ ಯುನಿಟ್‌ನ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಡಾ. ಶ್ರೀಕಾಂತ ಕಾಟೇವಾಲೆ, ಡಾ. ಪಿ.ಡಿ. ತೋಟದ, ಡಾ. ಗುರುರಾಜ ಸಜ್ಜನ, ಡಾ. ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಲ್ಯಾಬ್ ಟೆಕ್ನಿಷಿಯನ್ ವಿಜಯ ಮಾಂಡ್ರೆ, ಗಂಗಾಧರ ಮೆಣಸಿನಕಾಯಿ, ಪ್ರವೀಣ ಬೋಮಲೆ, ದುಂಡೇಶ ಕೊಟಗಿ, ವಿಜಯ ಮೆಕ್ಕಿ, ವಿಜಯ ಕರಡಿ, ಶರಣು ಗೋಡಿ, ಇಸ್ಮಾಯಿಲ್ ಆಡೂರ, ಫಕ್ಕಿರೇಶ ಜಂತ್ಲಿ ಸೇರಿ ಹಲವರಿದ್ದರು.