ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿ: ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ದಾನವು ಪುಣ್ಯವನ್ನು ತರುತ್ತದೆ, ಬಡವರಿಗೆ ಸಹಾಯ ಮಾಡುತ್ತದೆ. ಸಮಾಜದಲ್ಲಿ ಸಮಾನತೆ ಹಾಗೂ ಸಹಾನುಭೂತಿಯ ಭಾವನೆಯನ್ನು ಬೆಳೆಸುತ್ತದೆ. ನಿಸ್ವಾರ್ಥವಾಗಿ, ಪೂರ್ಣ ಹೃದಯದಿಂದ, ಸಂದೇಹವಿಲ್ಲದೆ ಮಾಡುವ ದಾನವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಹಂಪಸಾಗರ, ನರೇಗಲ್ಲ ಶ್ರೀಮದ್ ರಂಭಾಪೂರಿ ವೀರಸಿಂಹಾಸನ ನವಲಿ ಕಟ್ಟಿಮನಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ನರೇಗಲ್ಲನ ನವಲಿ ಕಟ್ಟಿಮನಿ ಹಿರೇಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀ ರುದ್ರಾಭಿಷೇಕ, ಅಷ್ಟೋತ್ತರ ಶತನಾಮಾವಳಿ ಮಹಾಪೂಜಾ ಮುಕ್ತಾಯ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀವರ್ಚನ ನೀಡಿದರು.

ದಾನವು ಕೇವಲ ಹಣವನ್ನು ಕೊಡುವುದಲ್ಲ, ಬದಲಿಗೆ ನಿಮ್ಮ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ನಿಸ್ವಾರ್ಥವಾಗಿ ಕೊಡುಗೆ ನೀಡುವುದಾಗಿದೆ. ಈ ಉತ್ತಮ ಕಾರ್ಯವು ವ್ಯಕ್ತಿಗತ ಏಳಿಗೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ನಾವು ಮಾಡಿರುವ ಪರೋಪಕಾರ ರೂಪದ ದಾನ ಎಂದೂ ವ್ಯರ್ಥವಾಗದು. ದಾನ ಮಾಡುವುದನ್ನು ರೂಢಿಸಿಕೊಳ್ಳೋಣ ಮತ್ತು ಕೊಡುವುದಲ್ಲಿರುವ ಸಂತೋಷವನ್ನು ಅನುಭವಿಸೋಣ ಎಂದರು.

ಸೆ. 22ರಿಂದ ಅಕ್ಟೊಬರ್ 2ರವರೆಗೆ ಬಸವಕಲ್ಯಾಣದಲ್ಲಿ ಜರುಗಲಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಕ್ಕೆ ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಗದ್ಗುರುಗಳ ದರ್ಶನಾಶೀರ್ವಾದ ಪಡೆದುಕೊಳ್ಳಬೇಕು ಎಂದರು.

ಶ್ರೀ ಸದ್ಗುರು ಮಹಾದೇವ ತಾತನವರ ದಿವ್ಯ ಪಂಚಲೋಹದ ಮೂರ್ತಿಗೆ ಮಹಾರುದ್ರ ಅಭಿಷೇಕ ಹಾಗೂ ಶ್ರೀ ಸದ್ಗುರು ಮಹಾದೇವ ತಾತನವರ ಕೃಪ ಸಂಜಾತರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳವರ ಭಾವಚಿತ್ರಕ್ಕೆ ಅಷ್ಟೋತ್ತರ ಶತನಾಮಾವಳಿ, ಮಹಾ ಮಂಗಳಾರತಿ, ಅನ್ನ ಸಂತರ್ಪಣೆ ಜರುಗಿತು.

ಅರ್ಚಕ ಮಹಾದೇವಸ್ವಾಮಿ ನವಲಿಹಿರೇಮಠ, ಉಮೇಶ ಉಮಚಗಿ, ಮಹಾದೇವಪ್ಪ ಬೇವಿನಕಟ್ಟಿ, ವೀರಪ್ಪ ಹುಲ್ಲೂರ, ಕೆ.ಪಿ. ಸಾಲಿಮಠ, ಮಲ್ಲಿಕಾರ್ಜುನ ಮಲ್ಲನಗೌಡ್ರ, ಶಿವಪುತ್ರಪ್ಪ ಸಂಗನಾಳ, ಪ್ರಭು ಪೂಜಾರ, ವಿಶ್ವನಾಥ ಕೋಡಿಕೊಪ್ಪಮಠ, ಗವಿಸಿದ್ದಪ್ಪ ಗೊಡಚಪ್ಪನವರ, ರತ್ನಮ್ಮ ಧಡೇಸೂರಮಠ ಮುಂತಾದವರಿದ್ದರು. ಮುತ್ತಪ್ಪ ಹಡಪದ ನಿರ್ವಹಿಸಿದರು.


Spread the love

LEAVE A REPLY

Please enter your comment!
Please enter your name here