ಅನಾಥ ಮಕ್ಕಳ ಶಿಕ್ಷಣಕ್ಕೆ ದೇಣಿಗೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇತ್ತಿಚೀನ ದಿನಗಳಲ್ಲಿ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸುವುದು ಮಕ್ಕಳಿಗೂ, ಪಾಲಕರಿಗೂ ಒಂದು ರೀತಿಯ ಪ್ರತಿಷ್ಠೆಯ ಪ್ರಶ್ನೆ ಎನ್ನುವಂತಾಗಿದೆ. ಆದರೆ ಪಟ್ಟಣದ ವೀರಯ್ಯ ಹಿರೇಮಠ ಅವರು ಈ ವರ್ಷ ತಮ್ಮ ಮಗನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಅಚರಿಸುವ ಉದ್ದೇಶವನ್ನು ಕೈಬಿಟ್ಟು ಹೂವಿನಶಿಗ್ಲಿ ಶ್ರೀ ವಿರಕ್ತಮಠದ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅನಾಥ ಮಕ್ಕಳ ಶಿಕ್ಷಣಕ್ಕೆ ದೇಣಿಗೆ ನೀಡುವ ಮೂಲಕ ವಿಶೇಷತೆ ಮೆರೆದಿದ್ದಾರೆ.

Advertisement

ವೀರಯ್ಯ ಅವರು ವ್ಯಾಪಾರಿಯಾಗಿದ್ದು, ಎಲ್ಲರಂತೆ ಮಗನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ನಿಶ್ಚಯ ಮಾಡಿದ್ದರು. ಆದರೆ ದುಂದು ವೆಚ್ಚವನ್ನು ಕೈಬಿಟ್ಟು ಇದನ್ನು ಅನಾಥ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೀಡುವುದು ಯೋಗ್ಯ ಎನ್ನುವ ಯೋಚನೆ ಮಾಡಿ ಮಗನ ಹುಟ್ಟುಹಬ್ಬದ ನಿಮಿತ್ತ 51,101 ರೂಗಳನ್ನು ಶ್ರೀಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳಿಗೆ ಶುಕ್ರವಾರ ಸಲ್ಲಿಸಿದರು.

ಈ ವೇಳೆ ಶ್ರೀಗಳು ಮಾತನಾಡಿ, ಶ್ರೀಮಠದ ಗುರುಕುಲದಲ್ಲಿ ಸುಮಾರು 300ಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಜನರು ನೀಡುವ ದೇಣಿಗೆಯ ಮೂಲಕ ಮಕ್ಕಳಿಗೆ ಊಟ, ವಸತಿಯೊಂದಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಈ ಮಕ್ಕಳ ಶಿಕ್ಷಣಕ್ಕಾಗಿ ವೀರಯ್ಯ ಹಿರೇಮಠ ತಮ್ಮ ಮಗನ ಹುಟ್ಟುಹಬ್ಬದ ನಿಮಿತ್ತ ದೇಣಿಗೆ ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here