ನಿಮ್ಮ ಆಸ್ತಿಯನ್ನು ಪರಭಾರೆ ಮಾಡದಿರಿ: ಶಿವಪುತ್ರಪ್ಪ ಸಂಗನಾಳ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಿಮ್ಮ ಹೆಸರಲ್ಲಿ ಇರುವ ಆಸ್ತಿಯನ್ನು ನಿಮ್ಮ ಹೆಸರಲ್ಲಿಯೇ ಉಳಿಸಿಕೊಳ್ಳಿ. ಯಾವುದೋ ವ್ಯಾಮೋಹಕ್ಕೆ ಬಿದ್ದು ಪರಭಾರೆ ಮಾಡಿದರೆ ಮುಂದೆ ಪಶ್ಚಾತ್ತಾಪ ಪಡಬೇಕಾದೀತು ಎಂದು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ ಹೇಳಿದರು.

Advertisement

ಸಂಘದ ಕಚೇರಿಯಲ್ಲಿ ನಡೆದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿಮ್ಮ ಪಿಂಚಣಿ ಮತ್ತಿತರ ದಾಖಲೆಗಳಲ್ಲಿ ನಾಮಿನಿ ಹೆಸರು ಒಂದೇ ರೀತಿಯಾಗಿರದಿದ್ದಲ್ಲಿ ತಡ ಮಾಡದೆ ಜಿಲ್ಲಾ ಸೈನಿಕ ಕಚೇರಿಯ ಮೂಲಕ ರಿಕಾರ್ಡ್ ಆಫೀಸ್‌ಗೆ ಪತ್ರವನ್ನು ಬರೆದು ಪಾರ್ಟ್-2 ಆರ್ಡರ್ ಮಾಡಿಸಲು ಅವರು ತಿಳಿಸಿದರು.

ನಿವೃತ್ತ ಸೈನಿಕರಿಗೆ ಉಚಿತ ನಿವೇಶನ ನೀಡಲು ವಿನಂತಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೆವು. ಅದಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ಗಜೇಂದ್ರಗಡದ ತಹಸೀಲ್ದಾರರಿಗೆ ಪತ್ರವನ್ನು ಬರೆದು ನಿಮ್ಮ ವ್ಯಾಪ್ತಿಯಲ್ಲಿನ ಪಟ್ಟಣ ಪಂಚಾಯತಿ, ನಗರ ಸಭೆಗಳ ವ್ಯಾಪ್ತಿಯಲ್ಲಿ ನಿವೇಶನ ಲಭ್ಯವಿದ್ದಲ್ಲಿ ಅರ್ಹರನ್ನು ಗುರುತಿಸಿ ನಿವೇಶನ ಮಂಜೂರು ಮಾಡಲು ತಿಳಿಸಿದ್ದಾರೆ ಎಂದರು.

ಸಭೆಯಲ್ಲಿ ಶಿವಪ್ಪ ಹಂಡಿ, ಉಮೇಶ ಕರಮುಡಿ, ಗುರುಶಾಂತಗೌಡ ಮಲ್ಲನಗೌಡ್ರ, ಬಸವರಾಜ ಕಡೆತೊಟ್ಟದ, ಸಂಗಪ್ಪ ಕುಷ್ಟಗಿ, ಕುಮಾರಸ್ವಾಮಿ ಕೋರಧಾನ್ಯಮಠ, ಶಿವಾನಂದ ಬಂಡಿಹಾಳ, ಈರಪ್ಪ ದೊಡ್ಡಣ್ಣವರ, ಮಲ್ಲಪ್ಪ ಕಡೆತೊಟ್ಟದ ಮತ್ತು ರಾಮಪ್ಪ ರೋಣದ ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here