ಕೆಲಸ ಕೇಳುವವರಾಗಬೇಡಿ, ನೀಡುವವರಾಗಿ

0
priyank
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಸೇವೆ ನೀಡಬೇಕು. ಕೆಲಸ ಕೇಳುವವರಾಗದೇ ನೀಡುವವರಾಗಬೇಕೆಂದು ವಿಶ್ವ ವಿದ್ಯಾಲಯದ ಕುಲಾಧಿಪತಿಗಳು ಆಗಿರುವ ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದರು.

Advertisement

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಹುತೇಕ ಗ್ರಾಮೀಣ ಪ್ರದೇಶದಿಂದ ಬಂದಿರುವ ಯುವ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಅವಿಸ್ಮರಣೀಯ ಹಾಗೂ ಸಂತೃಪ್ತಿ ತರುವ ದಿನವಾಗಿದೆ. ಈ ಜ್ಞಾನ ಬಂಢಾರದಿಂದ ಜೀವನದ ಮೌಲ್ಯ, ಸಿದ್ಧಾಂತಗಳನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು. ಸಾರ್ಥಕ ಜೀವನ ನಡೆಸುವ ಕನಸು ಮತ್ತು ಸಾಧಿಸಬೇಕೆಂಬ ಕಿಚ್ಚು ಹೊತ್ತು ಇಲ್ಲಿಂದ ಹೊರಡುತ್ತಿದ್ದೀರಿ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದರು.

ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಘಟಿಕೋತ್ಸವ ಮಹತ್ವದ ಹೆಜ್ಜೆಯಾಗಿದೆ. ವಿಶ್ವ ವಿದ್ಯಾಲಯದಲ್ಲಿ ಪಡೆದಿರುವ ಜ್ಞಾನ ಮತ್ತು ಕೌಶಲ್ಯವನ್ನು ಬಳಸಿಕೊಂಡು ಸಾಮಾಜಿಕ ಪರಿವರ್ತನೆ ತರುವುದು ನಿಮ್ಮೆಲ್ಲರ ಜವಾಬ್ದಾರಿ. ಗ್ರಾಮೀಣ ಪರಿವರ್ತನೆಯ ಸಂಕಲ್ಪ ಹೊತ್ತು ಸಾಗಿರುವ ನೀವೆಲ್ಲರೂ ವಿಶ್ವ ವಿದ್ಯಾಲಯದ ರಾಯಭಾರಿಗಳಾಗುತ್ತೀರಿ ಎಂದರು.

ಇಂದಿನ ಆಧುನಿಕ ಯುವ ಜನಾಂಗದ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸಲು ಅವರು ಸಿಂಹಗಳಂತೆ ಶ್ರಮಿಸುತ್ತಾರೆ. ಕಲೆಗೆ ವಿಜ್ಞಾನ ಅಳವಡಿಸುವುದೇ ತಂತ್ರಜ್ಞಾನ ಎಂದು ಸರಳ ಭಾಷೆಯಲ್ಲಿ ಹೇಳಬಹುದು. ದೇಶದ ಆರ್ಥಿಕ ಪ್ರಗತಿಯಲ್ಲಿ ತಂತ್ರಜ್ಞಾನದ ಪಾತ್ರ ಪ್ರಮುಖವಾಗಿದೆ ಎಂದರು.

ಕೇಂದ್ರ ಸರ್ಕಾರ ಪಂಚಾಯತ್ ರಾಜ್ ಮಂತ್ರಾಲಯದ ಮಾಜಿ ಜಂಟಿ ಕಾರ್ಯದರ್ಶಿ ಡಾ. ಟಿ.ಆರ್. ರಘುನಂದನ್ ಘಟಿಕೋತ್ಸವದ ಭಾಷಣ ಮಾಡಿ, ಕೃಷಿ ವಲಯವು ಕುಂಠಿತವಾಗಿರುವ ಇಂದಿನ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯಲ್ಲಿ ಗ್ರಾಮೀಣ ಆರ್ಥಿಕತೆ ವಿಶೇಷವಾಗಿ, ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ ಎಂದರು.

ನಾವೆಲ್ಲ ವಿವಿಧ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಪ್ರಾದೇಶಿಕ ಮತ್ತು ಭಾಷಾ ಹಿನ್ನೆಲೆಯಿಂದ ಬಂದವರು. ವಿಭಜನೆಯನ್ನು ಉತ್ತೇಜಿಸಲು ಅಥವಾ ಏಕತೆಯನ್ನು ಉತ್ತೇಜಿಸಲು ನಾವು ಇವುಗಳನ್ನು ಬಳಸಬಹುದು. ನಿಮ್ಮ ವೈವಿಧ್ಯತೆಯು ಏಕತೆ, ಸಹಾನುಭೂತಿ ಮತ್ತು ದೇಶಭಕ್ತಿಗೆ ಅಡ್ಡಿ ಬಾರದಂತೆ ಖಚಿತಪಡಿಸಿಕೊಳ್ಳಲು ಸರಳವಾದ ಮಾರ್ಗವಿದೆ ಎಂದರು.

ಸಂವಿಧಾನವು ಸುಮಾರು 400 ವಿಧಿಗಳನ್ನು ಹೊಂದಿರುವ ಸುದೀರ್ಘ ದಾಖಲೆಯಾಗಿದೆ. ಅದೆಲ್ಲವನ್ನು ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಇಡೀ ಸಂವಿಧಾನವನ್ನು 5 ಗಾಂಧೀ ತತ್ವಗಳಲ್ಲಿ ಸಂಕ್ಷಿಪ್ತಗೊಳಿಸಬಹುದು. ಅವುಗಳೆಂದರೆ ಸತ್ಯ, ಅಹಿಂಸೆ, ಸ್ವರಾಜ್, ಸರ್ವೋದಯ ಮತ್ತು ಅಂತ್ಯೋದಯ. ಈ ತತ್ವಗಳನ್ನು ಅನುಸರಿಸಲು ನಿಮಗೆ ಎರಡು ಪ್ರಮುಖ ಗುಣಲಕ್ಷಣಗಳು ಅಗತ್ಯವಾಗಿವೆ. ಅವುಗಳೆಂದರೆ ಧೈರ್ಯ ಮತ್ತು ತಾಳ್ಮೆ ಎಂದು ನೆರೆದ ವಿದ್ಯಾರ್ಥಿಗಳಿಗೆ ತಿಳಿಸಿದರು.

ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ, ಕುಲಸಚಿವರಾದ ಡಾ. ಸುರೇಶ ನಾಡಗೌಡ್ರ ಉಪಸ್ಥಿತರಿದ್ದರು.

ವಿಶ್ವವಿದ್ಯಾಲಯವು ಪಠ್ಯಕ್ರಮದಲ್ಲಿ ಶಿಕ್ಷಣ, ಸಂಶೋಧನೆ, ತರಬೇತಿ ಹಾಗೂ ವಿಸ್ತರಣಾ ಚಟುವಟಿಕೆಗಳನ್ನು ಅಳವಡಿಸಿಕೊಂಡಿದ್ದು, ಪಾರಂಪರಿಕ ಜ್ಞಾನ, ಆಧುನಿಕ ತಂತ್ರಜ್ಞಾನ ಮಿಶ್ರಿತ ಬೋಧನಾ ಕಲಿಕಾ ಕ್ರಮಗಳನ್ನು ಅನುಸರಿಸುತ್ತಿದೆ. ವಿಶ್ವ ವಿದ್ಯಾಲಯದ ಸ್ಥಾಪನೆಗೆ ಪ್ರೋತ್ಸಾಹ ಹಾಗೂ ಶ್ರಮಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗದಗ ಜಿಲ್ಲೆಯ ಸಚಿವ ಡಾ. ಎಚ್.ಕೆ. ಪಾಟೀಲ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದನೆಗಳನ್ನು ಸಲ್ಲಿಸಿದರು.


Spread the love

LEAVE A REPLY

Please enter your comment!
Please enter your name here