HomeGadag Newsಎತ್ತರಕ್ಕೆ ಬೆಳೆದರೆಂದು ಅಹಂಕಾರ ತೋರದಿರಿ: ಡಿಐಜಿಪಿ ರವಿ ಚನ್ನಣ್ಣವರ

ಎತ್ತರಕ್ಕೆ ಬೆಳೆದರೆಂದು ಅಹಂಕಾರ ತೋರದಿರಿ: ಡಿಐಜಿಪಿ ರವಿ ಚನ್ನಣ್ಣವರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮನುಷ್ಯ ಜೀವನದಲ್ಲಿ ಹಿಮಾಲಯದೆತ್ತರಕ್ಕೆ ಬೆಳೆದರೂ ಅವನ ಕಾಲು ನೆಲದ ಮೇಲಿರಬೇಕು. ಅಂದರೆ ಅವನ ವ್ಯಕ್ತಿತ್ವಕ್ಕೊಂದು ಅರ್ಥ ಬರುತ್ತದೆ. ಬದಲಾಗಿ ಬೆಳೆದರೆಂದು ಅಹಂಕಾರ ತೋರಿದರೆ ಅಂದೇ ಅವನ ಅವನತಿ ಪ್ರಾರಂಭವಾಗುತ್ತದೆ. ಆದ್ದರಿಂದ ವಿನಯವಂತಿಕೆಯನ್ನು, ವಿಧೇಯತೆಯನ್ನು ಜೀವನದಲ್ಲಿ ರೂಢಿಸಿಕೊಳ್ಳಿ ಎಂದು ಅಗ್ನಿಶಾಮಕ ಡಿಐಜಿಪಿ ರವಿ ಚನ್ನಣ್ಣವರ ಹೇಳಿದರು.

ಪಟ್ಟಣದ ಎಸ್‌ಎ ಪಿಯು ಕಾಲೇಜಿನಲ್ಲಿ ಬೀಚಿ ಬಳಗ ಮತ್ತು ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿದ್ಯಾರ್ಥಿ ಪ್ರೇರಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಎಂದಿಗೂ ಇದು ನನ್ನಿಂದಾಗದು ಎನ್ನಬೇಡಿ. ಮನುಷ್ಯನನ್ನು ಸೋಲಿಸುವ ಯಾವ ವಸ್ತುವೂ ಈ ಭೂಮಿಯ ಮೇಲಿಲ್ಲ. ಸಾಧಿಸಲು ಮನಸ್ಸು ಮಾಡಿ, ಗುರಿಯ ಬೆನ್ನು ಹತ್ತಿ ಅದೇ ನಿಮ್ಮನ್ನು ತನ್ನೆಡೆಗೆ ಕರೆದುಕೊಂಡು ಹೋಗುತ್ತದೆ. ಸಮಾಜದಲ್ಲಿನ ಎಲ್ಲರಿಂದ ಕಲಿಯುವುದು ಬಹಳಷ್ಟಿದೆ. ಅದನ್ನು ಕಲಿಯಿರಿ. ನಿಮ್ಮೊಳಗೆ ನೀವು ಸೋಲನ್ನು ಒಪ್ಪಿಕೊಳ್ಳದ ಹೊರತು ಯಾರೂ ನಿಮ್ಮನ್ನು ಸೋಲಿಸಲಾರರು ಎಂಬುದನ್ನು ನೆನಪಿನಲ್ಲಿಡಿ. ಮಾಡುವ ಕೆಲಸದಲ್ಲಿ ಯಾವುದೂ ಕನಿಷ್ಠ, ಶ್ರೇಷ್ಠವೆಂಬುದಿಲ್ಲ. ಮಾಡುವುದನ್ನು ಮಾತ್ರ ಅತ್ಯಂತ ಶ್ರದ್ಧೆಯಿಂದ ಮಾಡಿದರೆ ನೀವು ಯಶಸ್ಸಿನ ತುತ್ತ ತುದಿಯಲ್ಲಿರುತ್ತೀರಿ ಎಂದು ಹೇಳಿದರು.

ಮಾನಸಿಕ ಗುಲಾಮಗಿರಿಯಿಂದ ಹೊರಬನ್ನಿರಿ. ಒಮ್ಮೆ ನೀವು ವಿದ್ಯಾರ್ಥಿ ಜೀವನವನ್ನು ಹಾಳುಮಾಡಿಕೊಂಡರೆ ಆಮೇಲೆ ಏನು ಮಾಡಿದರೂ ನಿಮ್ಮ ಭವಿಷ್ಯವನ್ನು ಸರಿಪಡಿಸಲು ಸಾಧ್ಯವಿಲ್ಲ. ಜೀವನಪರ್ಯಂತ ನೀವು ಗೋಳಾಡಬೇಕಾಗುತ್ತದೆ. ಈ ಜಗತ್ತಿನಲ್ಲಿ ಸಾಧಕರ ಹೆಸರು ಮಾತ್ರ ಅಜರಾಮರವಾಗಿರುತ್ತದೆ. ನೀವು ಗಟ್ಟಿ ಮನಸ್ಸು ಮಾಡಿ ಸಾಧನೆಯತ್ತ ದಿಟ್ಟ ಹೆಜ್ಜೆಯನ್ನಿಡಿ. ಬಡವರ ಬಗ್ಗೆ ಕನಿಕರವಿರಲಿ. ಕನಿಷ್ಠ ಹತ್ತು ಜನ ಸಾಧಕರ ಚರಿತ್ರೆಯನ್ನು ಓದಿ. ಇದರಿಂದ ಸಾಧಿಸಬೇಕೆನ್ನುವ ಛಲ, ಸ್ಫೂರ್ತಿ ತಾನಾಗಿಯೇ ಬರುತ್ತದೆ. ನಿಮ್ಮ ತಂದೆ-ತಾಯಿಗೆ ಮೊದಲ ಆದ್ಯತೆ ನೀಡಿ. ಅವರನ್ನು ಶ್ರದ್ಧೆಯಿಂದ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಮುಪ್ಪಿನ ಬಸವಲಿಂಗ ಶ್ರೀಗಳವರು ಆಶೀರ್ವಚನ ನೀಡಿ, ನಿಶ್ಚಿತ ಗುರಿಯೊಂದಿಗೆ ನಿಶ್ಚಿತ ಮನಸ್ಸಿಟ್ಟು ಅಭ್ಯಾಸ ಮಾಡಿ. ಸೋಲು ನಿಮ್ಮ ಬಳಿ ಸುಳಿಯದು ಎಂದರು. ಮಿಥುನ ಪಾಟೀಲ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕೆ.ಎಸ್. ಕಳಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ ನಿರೂಪಿಸಿದರು. ಎಂ.ಎಸ್. ದಢೇಸೂರಮಠ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವೇದಿಕೆಯ ಮೇಲೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಅಧ್ಯಕ್ಷ ಡಾ. ಎಸ್.ಎ. ಪಾಟೀಲ ಉಪಸ್ಥಿತರಿದ್ದರು. ಡಾ. ಕಲ್ಲಯ್ಯ ಹಿರೇಮಠ, ಮುಖ್ಯ ಶಿಕ್ಷಕ ಬಿ.ಬಿ. ಕುರಿ ನಿರ್ವಹಿಸಿದರು.

ಜೀವನದಲ್ಲಿ ಬಡತನ, ಸಿರಿತನ ಎಂದಿಗೂ ಶಾಶ್ವತವಲ್ಲ. ನಿಮ್ಮ ಮುಂದೆ ಗುರಿಯಿರಬೇಕು, ಮನದಲ್ಲಿ ಅದನ್ನು ಸಾಧಿಸುವ ಛಲ ಇರಬೇಕು. ಅದರೊಂದಿಗೆ ಪ್ರಾಮಾಣಿಕ ಪರಿಶ್ರಮವೂ ಬೆರೆತರೆ ನಿಮ್ಮನ್ನು ಹಿಡಿಯುವವರೇ ಇಲ್ಲ. ಈಗ ನಿಮ್ಮ ಜೀವನದ ತುಂಬ ಬರೀ ಶಿಕ್ಷಣದ ಕನಸೇ ತುಂಬಿರಬೇಕು. ಅದನ್ನು ನನಸು ಮಾಡಿಕೊಳ್ಳುವತ್ತ ಲಕ್ಷ್ಯ ವಹಿಸಿ ತಪಸ್ಸಿನಂತೆ ಅಧ್ಯಯನವನ್ನು ಮಾಡಿದರೆ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ.
ರವಿ ಚನ್ನಣ್ಣವರ.
ಡಿಐಜಿಪಿ, ಅಗ್ನಿಶಾಮಕ ದಳ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!