ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯನಿಗೆ ಆರೋಗ್ಯವೇ ಮಹಾ ಭಾಗ್ಯವಾಗಿದೆ. ಆರೋಗ್ಯದ ಬಗ್ಗೆ ಯಾರೂ ನಿಷ್ಕಾಳಜಿ ಮಾಡಬಾರದು ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ (ಉಖಾ) ಕುಮಾರ ಪೂಜಾರ ತಿಳಿಸಿದರು.
ತಾಲೂಕಿನ ಕಳಸಾಪೂರ ಗ್ರಾಮ ಪಂಚಾಯಿತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ಮಾನ್ ಆರೋಗ್ಯ ಮಂದಿರ (ಎಎಎಂ) ಕಳಾಸಾಪುರ ಇವುಗಳ ಆಶ್ರಯದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.
ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ತಾಲೂಕಿನ ಬಹುತೇಕ ಗ್ರಾಮಗಳಲ್ಲಿಯ ಉದ್ಯೋಗ ಖಾತ್ರಿ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿದೆ. ಬಡ ಕೂಲಿಕಾರರಿಗೆ ಉಚಿತ ಆರೋಗ್ಯ ಶಿಬಿರದಿಂದ ತುಂಬಾ ಅನುಕೂಲವಾಗಿದೆ ಎಂದರು.
ಸಮುದಾಯ ಆರೋಗ್ಯ ಅಧಿಕಾರಿ ಡಾ. ಎಲ್.ಕೃಷ್ಣ ಮಾತನಾಡಿ, ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಸ್ಥಳದಲ್ಲಿಯೇ ಬಿಪಿ, ಶುಗರ್, ಮಧುಮೇಹ, ಅತಿ ರಕ್ತದೊತ್ತಡದಂತಹ ಪ್ರಾಥಮಿಕ ಅಸಾಂಕ್ರಾಮಿಕ ಗುಣಲಕ್ಷಣಗಳನ್ನು ಪತ್ತೆಹಚ್ಚಿ ಸೂಕ್ತ ಸಮಾಲೋಚನೆ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾ.ಪಂ ಅಧ್ಯಕ್ಷರಾದ ಅನಸೂಯಾ ಬೆಟಗೇರಿ, ಉಪಾಧ್ಯಕ್ಷರಾದ ರಾಜೇಶ್ವರಿ ಘೋಡಕೆ, ತಾ.ಪಂ ಐಇಸಿ ವೀರೇಶ ಬಸನಗೌಡ್ರ, ಗ್ರಾ.ಪಂ ಕಾರ್ಯದರ್ಶಿ ಪ್ರೀತಮ್ ಬಳ್ಳಾರಿ, ಗ್ರಾ.ಪಂ ಸಿಬ್ಬಂದಿಗಳಾದ ಶರಣಪ್ಪ ಹುಯಿಲಗೋಳ, ಮಾರುತಿ ಚಲವಾದಿ, ಬಿಎಫ್‌ಟಿ ದುರ್ಗಪ್ಪ ಆಲೂರ, ಮೈಲಾರಪ್ಪ ಸೋಮನಕಟ್ಟಿ, ಆರೋಗ್ಯ ಇಲಾಖೆಯ ಎಲ್.ಎಂ. ದೇವದುರ್ಗ, ಆಶಾ ಕಾರ್ಯಕರ್ತೆಯರಾದ ಬಸವಣ್ಣೆಮ್ಮ ಓಳೇಕಾರ, ಲಲಿತಾ ತಳವಾರ, ರತ್ನ ಲಮಾಣಿ, ಚನ್ನಮ್ಮ ಮಾದರ ಸೇರಿದಂತೆ ಕಾಯಕ ಬಂಧುಗಳು ಹಾಗೂ ಕೂಲಿಕಾರರು ಇದ್ದರು.


