ಸಂಡೂರು: ಬಿಜೆಪಿ ಅಪಪ್ರಚಾರವನ್ನು ನಂಬಬೇಡಿ, ಅಭಿವೃದ್ಧಿಗೆ ನಿಮ್ಮ ಮತ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸಂಡೂರು ವಿಧಾನಸಭಾ ಕ್ಷೇತ್ರದ ಬನ್ನಿಹಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರ ಗೆಲುವಿನ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಹತ್ತು ಹಲವು ಭಾಗ್ಯಗಳನ್ನು ಕೊಟ್ಟಿದ್ದು, ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿ ವರ್ಷಕ್ಕೆ 56 ಸಾವಿರ ಕೋಟಿ ಹಣವನ್ನು ನಿಮ್ಮ ಖಾತೆಗೆ ನೇರವಾಗಿ ಹಾಕ್ತಾ ಇರುವುದು ನಮ್ಮ ಸರ್ಕಾರ.
ಆದ್ದರಿಂದ ನಿಮ್ಮ ಬದುಕಿಗೆ ಪ್ರತೀ ತಿಂಗಳು ಬೆಳಕು ನೀಡುವ ನಮಗೆ ಬೆಂಬಲಿಸಬೇಕೋ, ಚುನಾವಣೆ ಬಂದಾಗ ಮಾತ್ರ ಕೊಡುವ ಅಕ್ರಮ ಗಣಿಗಾರಿಕೆಯ ಹಣಕ್ಕೆ ಓಟು ಹಾಕಿದ್ರೆ ಅದು ಅನ್ಯಾಯ ಆಗಲ್ವಾ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಅವರು ಅನ್ನಪೂರ್ಣ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು.
ನಾವಿನ್ನೂ ಮೂರೂವರೆ ವರ್ಷ ಅಧಿಕಾರದಲ್ಲಿ ಇರ್ತೀವಿ. ಅಲ್ಲಿಯವರೆಗೂ ನಾವು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಮುಂದುವರೆಸ್ತೀವಿ. ಬಿಜೆಪಿ ಅಪಪ್ರಚಾರವನ್ನು ನಂಬಬೇಡಿ. ಸುಳ್ಳುಗಳಿಗೆ ಮೋಸ ಹೋಗಬೇಡಿ. ಹೃದಯದ ಮಾತು ಕೇಳಿ ಅಭಿವೃದ್ಧಿಗೆ ನಿಮ್ಮ ಮತ ನೀಡಿ ಎಂದರು. ಅನ್ನಪೂರ್ಣಮ್ಮ ಗೆದ್ದರೆ ನಾನೇ ಗೆದ್ದ ಹಾಗೆ. ಅನ್ನಪೂರ್ಣಮ್ಮ ಅವರಿಗೆ ಬೀಳುವ ಪ್ರತೀ ಓಟು ನನಗೆ ಹಾಕಿದಂತೆ, ಸಂತೋಷ್ ಲಾಡ್ ಅವರಿಗೆ ಹಾಕಿದಂತೆ ಎಂದರು.