ವಿಜಯಪುರ:- ಹೆಚ್ಚು ಮೊಬೈಲ್ ನಲ್ಲಿ ಚಾಟ್ ಮಾಡುತ್ತಿದ್ದದ್ದನ್ನು ಪ್ರಶ್ನಿಸಿ ಬುದ್ಧಿಮಾತು ಹೇಳಿದ್ದ ಗಂಡನನ್ನೇ ಖತರ್ನಾಕ್ ಹೆಂಡತಿ ಓರ್ವಳು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ವಿಜಯಪುರದ ಆಲಕುಂಟೆ ನಗರದಲ್ಲಿ ಜರುಗಿದೆ.
ತೇಜು ರಾಠೋಡ್ ಕೊಲೆಗೆ ಯತ್ನಿಸಿದ ಪತ್ನಿ. ಪತಿ ಅಜೀತ್ ರಾಠೋಡ್ ಸಧ್ಯ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತಿ ಗಾಢ ನಿದ್ರೆಯಲ್ಲಿದ್ದಾಗ ಚಾಕುವಿನಿಂದ ಕತ್ತಿಗೆ ಬಲವಾಗಿ ಇರಿದಿದ್ದಾಳೆ. ಘಟನೆ ವೇಳೆ ಅಜೀತ್ ಕಿರುಚಿಕೊಂಡಾಗ ಮನೆಯವರಿಗೆ ವಿಷಯ ಗೊತ್ತಾಗಿದೆ. ಕೂಡಲೇ ಅವರನ್ನು ನಗರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ. ಅಜೀತ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇನ್ನು ಘಟನೆಗೆ ಕಾರಣ..ಪತ್ನಿ ತೇಜುಗೆ ಬುದ್ದಿಮಾತು ಹೇಳಿದ್ದೇ ಅಜೀತ್ ಪ್ರಾಣಕ್ಕೆ ಸಂಚಕಾರ ತಂದಿದೆ ಎನ್ನಲಾಗಿದೆ. ಸದಾಕಾಲ ಮೊಬೈಲ್ನಲ್ಲಿ ಬೇರೆಯವರೊಂದಿಗೆ ಚಾಟ್ ಮಾಡುತ್ತಿದ್ದ ತೇಜುಗೆ ಚಾಟ್ ಮಾಡಬೇಡ ಎಂದು ಬುದ್ದಿ ಮಾತು ಹೇಳಿದ್ದಕ್ಕೆ ಪತಿ ಅಜೀತ್ ಮೇಲೆ ಸಿಟ್ಟಾಗಿ ಇಂತ ದುಸ್ಸಾಹಸ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.