ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಶಿರಹಟ್ಟಿ ಹಾಗೂ ಎಫ್.ಎಂ. ಡಬಾಲಿ ಪಿಯು ಕಾಲೇಜಿನ ಸಹಯೋಗದಲ್ಲಿ ಎಫ್.ಎಂ. ಡಬಾಲಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನಾಚರಣೆ ಆಚರಿಸಲಾಯಿತು.
ದಿವಾನಿ ನ್ಯಾಯಾಧೀಶರಾದ ಸತೀಶ್ ಎಂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆಯಲ್ಲಿ ಸಾಮಾಜಿಕ ನ್ಯಾಯವು ಅವಶ್ಯವಾಗಿದೆ. ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಹಕ್ಕುಗಳನ್ನು ಪಡೆಯುವುದರ ಜೊತೆಗೆ ಸಾಂವಿಧಾನಿಕ ಕರ್ತವ್ಯಗಳನ್ನು ಮರೆಯಬಾರದು. ಯುವ ಜನಾಂಗ ಸರಿಯಾದ ತಿಳುವಳಿಕೆಯ ಮೂಲಕ ಸಾಮಾಜಿಕ ಬದ್ಧತೆಯೊಂದಿಗೆ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕು ಎಂದರು.
ವಕೀಲರು ಹಾಗೂ ಬಾಲ ನ್ಯಾಯ ಮಂಡಳಿಯ ಸದಸ್ಯರಾದ ಪಿ.ಎಂ. ವಾಲಿ ವಿಶೇಷ ಉಪನ್ಯಾಸ ನೀಡಿ, ಹದಿಹರೆಯದ ಯುವಕರು ಆಧುನಿಕ-ತಾಂತ್ರಿಕ ಸೌಲಭ್ಯಗಳ ಉಪಯೋಗಕ್ಕಿಂತ ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಸಮಾಜದ ಸದೃಢ ಪ್ರಜೆಯಾಗಿ ಬದುಕಲು ಎಲ್ಲರಿಗೂ ಸಾಮಾಜಿಕ ನ್ಯಾಯ ಅವಶ್ಯವಾಗಿ ಬೇಕು. ಯಾವುದೇ ಜಾತಿ-ಮತ-ಲಿಂಗ ಭೇದಭಾವ ಇಲ್ಲದೆ ಸಾಮಾಜಿಕ ಸಮಾನತೆಯೊಂದಿಗೆ ವಿಶಾಲ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಕೀಲರ ಸಂಘದ ಅಧ್ಯಕ್ಷ ಅನಿಲ್ ಮಾನೆ ಮಾತನಾಡುತ್ತಾ, ಸಾಮಾಜಿಕ ಬದ್ಧತೆ ಎಲ್ಲರ ಧ್ಯೇಯವಾಗಬೇಕು. ಸದ್ವಿಚಾರವನ್ನು ಅಳವಡಿಸಿಕೊಳ್ಳುವ ಮೂಲಕ ಯಾವುದೇ ತಾರತಮ್ಯವಿಲ್ಲದೆ ಸಮಾನತೆಯ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಸದಸ್ಯರಾದ ಶಿವನಗೌಡ ಪಾಟೀಲ್ ವಹಿಸಿದ್ದರು. ಉಪನ್ಯಾಸಕರಾದ ಎಮ್.ಕೆ. ಲಮಾಣಿ ಸ್ವಾಗತಿಸಿದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಪಿಯುಸಿಯ ವಿದ್ಯಾರ್ಥಿನಿಯರಾದ ಮಧು ಗಾಣಿಗೇರ್ ಹಾಗೂ ಸಂಗಡಿಗರು ಪ್ರಾರ್ಥಿಸಿದರು.
ಸಿ.ಎಲ್. ಜಾದವ್, ದಿನೇಶ್, ವಿನಾಯಕ ಹಾಗೂ ಉಪನ್ಯಾಸಕರಾದ ಎಫ್.ಎ. ಬಾಬುಖಾನವರ, ಎಂ.ಎಂ. ನದಾಫ್, ವಾಯ್.ಎಸ್. ಪಂಗಣ್ಣವರ್, ಬಸವರಾಜ್, ಶಿರುಂದ್, ಪ್ರವೀಣ್ ಹೊಸೂರ್, ಮುಂತಾದವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಎಂ.ಸಿ. ಭಜಂತ್ರಿ ಮಾತನಾಡಿ, ದೇಶದ ಪ್ರಜೆಯಾಗಿ ನಾವೆಲ್ಲರೂ ಕಾನೂನನ್ನ ಗೌರವಿಸುವುದು ಹಾಗೂ ಕಾನೂನಿನ ನಿಯಮಗಳನ್ನು ತಪ್ಪದೇ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗೆಯೇ ಇಂದಿನ ಮಕ್ಕಳನ್ನು ಸದೃಢ ಸಮಾಜಕ್ಕೆ ನಿರ್ಮಾಣಗೊಳಿಸುವಲ್ಲಿ ಇಂತಹ ಸಂವಿಧಾನಿಕ ನಿಯಮಗಳನ್ನು ಕರ್ತವ್ಯಗಳನ್ನು ಜ್ಞಾಪಿಸುವ ಅವಶ್ಯಕತೆ ಇದೆ. ಇಂದಿನ ಯುವ ಜನಾಂಗ ಕಾನೂನಿನ ತಿಳುವಳಿಕೆ ಇಲ್ಲದೆ ಅದೆಷ್ಟೋ ತಪ್ಪುಗಳನ್ನು ಮಾಡುತ್ತಿರುವುದು ಕಂಡು ಬರುತ್ತಿದ್ದು, ಇವೆಲ್ಲವುಗಳನ್ನು ತಡೆಗಟ್ಟುವುದು ಪ್ರಜ್ಞಾವಂತ ಸಮಾಜದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದರು.