ವಿಜಯಸಾಕ್ಷಿ ಸುದ್ದಿ, ಗದಗ: ಪ್ರಸ್ತುತ ದಿನಮಾನದಲ್ಲಿ ಉತ್ಸವಗಳನ್ನು ಬಹುವಿಜೃಂಭಣೆ, ವೈಭವ, ಹೆಚ್ಚಿನ ಆಡಂಬರಗಳಲ್ಲಿ ಆಚರಿಸಿ ಉತ್ಸವದ ಮೂಲ ಉದ್ದೇಶವನ್ನೇ ಮರೆಯುತ್ತಿರುವುದು ಸಾಮಾನ್ಯವಾಗಿದೆ. ಇನ್ನುಳಿದ ಶಾಲಾ-ಕಾಲೇಜುಗಳು, ವಿದ್ಯಾವಂತರನ್ನು ಸೃಷ್ಟಿಸಿದರೆ ಯೋಗ ಪಾಠಶಾಲೆ ಪ್ರಜ್ಞವಂತ ನಾಗರಿಕರನ್ನು ಸೃಷ್ಟಿಸುವ ಸಂಸ್ಥೆಯಾಗಿದೆ. 50 ವರ್ಷಗಳಲ್ಲಿ ಸಾಧಿsಸಿದ ಸಾಧನೆ ಮತ್ತು ಮುಂದಿನ ಧೋರಣೆಗಳನ್ನು ತಿಳಿಸುವದಕ್ಕಾಗಿ ಸುವರ್ಣ ಮಹೋತ್ಸವ ಆಚರಣೆ ಇರಲಿ ಮತ್ತು ಅದು ಸಾತ್ವಿಕವಾಗಿರಲಿ ಎಂದು ಗದಗ-ಬೆಟಗೇರಿ ನಗರಸಭಾ ಪದವಿಪೂರ್ವ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಅನ್ನದಾನಿ ಹಿರೇಮಠರ ಅಭಿಪ್ರಾಯಪಟ್ಟರು.
ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆ ಮುಂಬರುವ 19-5-2025ರಂದು ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲು ಸನ್ನದ್ಧವಾಗಿದ್ದು, ಪೂರ್ವಭಾವಿಯಾಗಿ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಖ್ಯಾತ ವಾಗ್ಮಿಗಳು ಮತ್ತು ಹಿರಿಯರಾದ ಪ್ರಾ. ಕೆ.ಎಚ್. ಬೇಲೂರ ಮಾತನಾಡಿ, ಇಂದು ನಾವು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ತಾಂತ್ರಿಕ, ಕೃಷಿ, ವಿಜ್ಞಾನ ಇನ್ನಿತರೆ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಯೋಗ ಶಕ್ತಿಯ ಅಗತ್ಯತೆ ಇದೆ. ಅಂತೆಯೇ ಪೂಜ್ಯ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀಮಠದ ಪೀಠಾಧಿಪತಿಗಳಾದ ಮೇಲೆ ಪ್ರಪ್ರಥಮವಾಗಿ ಯೋಗ ಪಾಠಶಾಲೆ ಸ್ಥಾಪಿಸಿದರು. ಪೂಜ್ಯರ ಕಾರ್ಯ ಸಾರ್ಥಕಗೊಳ್ಳಲೆಂದು ಪ್ರಸ್ತುತ ಪೀಠಾಧಿಪತಿಗಳಾದ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸುಸಜ್ಜಿತ ಯೋಗ ಮಹಾವಿದ್ಯಾಲಯ ನಿರ್ಮಾಣಗೊಳ್ಳಲೆಂದು ಯೋಗ ಪಾಠಶಾಲೆಗೆ 2 ಎಕರೆ ಭೂಮಿ ಮೀಸಲಾಗಿರಿಸಿರುವದು ಈ ನಾಡಿನ ಸೌಭಾಗ್ಯವಾಗಿದೆ. ಈಗಾಗಲೇ ಪ್ರಾರಂಭಗೊAಡಿರುವ ಯೋಗ ಮಹಾವಿದ್ಯಾಲಯದ ನಿಯೋಜಿತ ಕಟ್ಟಡ ಪೂರ್ಣಗೊಳ್ಳಲು ಶ್ರಮಿಸೋಣ. ಈ ನಿಟ್ಟಿನಲ್ಲಿ ಯೋಗ ಪಾಠಶಾಲೆಯ ಸುವರ್ಣ ಮಹೋತ್ಸವವನ್ನು ಸಾರ್ಥಕ ರೀತಿಯಲ್ಲಿ ಆಚರಿಸೋಣ ಎಂದರು.
ಪ್ರಾರಂಭದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ನಡೆಯಿತು. ವಿ.ಎಂ. ಮುಂದಿನಮನಿ ಸ್ವಾಗತಿಸಿದರು. ಯೋಗ ಪಾಠಶಾಲೆ ನಿರ್ದೇಶಕ ಯೋಗಾಚಾರ್ಯ ಕೆ.ಎಸ್. ಪಲ್ಲದ ಪ್ರಾಸ್ತಾವಿಕವಾಗಿ ಸಭೆಯ ವಿಷಯ ತಿಳಿಸಿ ಕಾರ್ಯಕ್ರಮ ನಿರೂಪಿಸಿದರು. ಷಡಕ್ಷರಿ ಮೆಣಸಿನಕಾಯಿ ವಂದಿಸಿದರು.
ವಿಶೇಷ ಆಮಂತ್ರಿತರಾಗಿ ಆಗಮಿಸಿದ ಡಿ.ಜಿ.ಎಂ. ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಎಸ್.ಬಿ. ಗೋವಿಂದಪ್ಪ, ಯಾವುದೇ ಕಾರ್ಯ ಯಶಸ್ಸಿಗೆ ಸಂಘಟನೆ ಬೇಕು. ಸಂಘಟನೆಯ ಯಶಸ್ಸಿಗೆ ಎಲ್ಲ ಬಲ್ಲವನಾಗಿರುವ ಗುರು (ನಾಯಕ) ಬೇಕು. ಈ ಹಿನ್ನೆಲೆಯಲ್ಲಿ ಯೋಗ ಪಾಠಶಾಲೆ ಬೆಳೆದು ಬಂದಿದೆ. ಸರ್ವ ಸಮಸ್ಯೆಗಳ ಪರಿಹಾರ ಯೋಗದಿಂದ ಸಾಧ್ಯ ಎಂದು ನಾವೆಲ್ಲರೂ ಹೇಳುತ್ತೇವೆ. ಈ ಮಾತನ್ನು ಯೋಗ ಪಾಠಶಾಲೆ ನಿತ್ಯ ಸಾಧಿಸುತ್ತಿದೆ. ಯೋಗ ಪಾಠಶಾಲೆ ಕೈಗೊಂಡ ಕಾರ್ಯ ಯಶಸ್ಸಿಗೆ ನಾವೆಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಸ್ವಯಂ ಸೇವಕರಂತೆ ಕಾರ್ಯನಿರ್ವಹಿಸಿದರೆ ದೇಶಕ್ಕೆ ನೀಡುವ ಮಹಾನ್ ಕಾಣಿಕೆ ನಮ್ಮದಾಗುವದೆಂದು ಹೇಳಿದರು.



