ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿಯೊಬ್ಬರ ಮೇಲೂ ಸಮಾಜದ ಋಣ ಇರುತ್ತದೆ. ಹೀಗಾಗಿ ಹೆತ್ತವರ, ಶಿಕ್ಷಕರ, ಸಮಾಜದ ಋಣವನ್ನು ಮರೆಯಬಾರದು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಅವರು ನಗರದ ರೋಟರಿ ಸರ್ಕಲ್ ಹತ್ತಿರದ ಶ್ರೀ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಹೊಳೆಆಲೂರಿನ ಎಸ್.ಎಸ್. ಆಡಿನ ಜನಸೇವಾ ಸಂಸ್ಥೆಯ ಉದ್ಘಾಟನೆ ನೆರವೇರಿಸಿ, ಬಳಿಕ ಸಂಸ್ಥೆಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಸಾಧಕ ರತ್ನ’ ಪ್ರಶಸ್ತಿ ಪ್ರದಾನ ನೆರವೇರಿಸಿ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತರಿಗೆ ‘ಕನ್ನಡ ಕುವರ-ಕುವರಿ’ ರಾಜ್ಯ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು.
ಸಾಹಿತಿ, ಶಿಕ್ಷಕರಾಗಿರುವ ಹೊಳೆಆಲೂರಿನ ಎಸ್.ಕೆ. ಆಡಿನ ಮತ್ತಷ್ಟು ಸಮಾಜ ಸೇವೆ ಮಾಡುವ ಉದ್ದೇಶದಿಂದ ಎಸ್.ಎಸ್. ಆಡಿನ ಜನಸೇವಾ ಸಂಸ್ಥೆಯನ್ನು ಆರಂಭಿಸಿರುವುದು ಅಭಿನಂದನೀಯ. ಸಂಸ್ಥೆಗಳನ್ನು ಆರಂಭಿಸುವುದರ ಜೊತೆಗೆ ಸಮಾಜಕ್ಕೆ ನೀಡುವ ಕೆಲಸಗಳ ಬಗ್ಗೆ ಮುಂದಿನ ವರ್ಷದ ಕ್ರಿಯಾಯೋಜನೆಯನ್ನು ಸಹ ತಯಾರಿಸಿಕೊಳ್ಳಬೇಕು. ಸಂಸ್ಥೆಯು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಯಬೇಕು. ಆ ಮೂಲಕ ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡಲಿ ಎಂದು ಆಶಿಸಿದರು.
ಕಸಾಪ ಕಾರವಾರ ಜಿಲ್ಲಾ ಕಾರ್ಯದರ್ಶಿ ಗಣೇಶ ಬಿಷ್ಟಣ್ಣವರ ಮಾತನಾಡಿ, ಶ್ರದ್ಧೆ ಮತ್ತು ಧರ್ಮದಿಂದ ನಡೆಯುವುದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ಸಾಧನೆ ನಿಶ್ಚಿತ ಎಂದು ಹೇಳಿದರು.
ಭೈರನಹಟ್ಟಿ ದೊರೆಸ್ವಾಮಿಮಠದ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಎಸ್.ಎಸ್. ಆಡಿನ ಜನಸೇವಾ ಸಂಸ್ಥೆ ಅಧ್ಯಕ್ಷೆ ಶೋಭಾ ಎಸ್.ಆಡಿನ ಅವರು ಅಧ್ಯಕ್ಷತೆ ವಹಿಸಿದ್ದರು. ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡವಿನಮನಿ, ಅಶ್ವಿನಿ ಪ್ರಕಾಶನದ ಅಧ್ಯಕ್ಷೆ ವಿ.ವಿ. ಹಿರೇಮಠ, ಮುಂಡರಗಿಯ ನಿರ್ಮಲಾ ವಿವಿಧೋದ್ದೇಶ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ ನಿರ್ಮಲಾ ತೆರೆವಾಡೆ, ಗೋಟಗೋಡಿ ಜಾನಪದ ವಿವಿಯ ಸಹಪ್ರಾಧ್ಯಾಪಕ ಡಾ. ಪ್ರವೀಣ ಕರೆಯಪ್ಪಣ್ಣವರ, ಹೊಳೆಆಲೂರಿನ ಎಸ್‌ವೈವಿಎಸ್‌ನ ಸಹ ಕಾರ್ಯದರ್ಶಿ ವಿ.ಎಂ. ವಸ್ತ್ರದ, ವಿಶೇಷ ಆಹ್ವಾನಿತರಾಗಿ ಈರಣ್ಣ ಮಾದರ, ಬಸವರಾಜ ನೆಲಜರಿ, ಮರುಳಸಿದ್ದಪ್ಪ ದೊಡ್ಡಮನಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಬಸವರಾಜ ಕೊರ್ಲಳ್ಳಿ, ಸುನೀಲ ನಾ.ಯಲಿಗಾರ ಮುಂತಾದವರು ವೇದಿಕೆಯಲ್ಲಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪಾಂಡರಂಗ ವಿ.ಪತ್ತಾರ, ಅಂಬಕ್ಕ ಚಿತ್ರಗಾರ, ಕೃಷಿಕ ಮಲ್ಲಯ್ಯ ಗುರುಬಸಣ್ಣವರ, ಪತ್ರಕರ್ತ ಭೀಮನಗೌಡ ಪಾಟೀಲ, ರಾಜು ಹೆಬ್ಬಳ್ಳಿ, ಎ.ಬಿ. ಗುಳಣ್ಣವರ, ವೀರೇಶ ಕಮ್ಮಾರ, ಕೆ.ವಾಯ್. ರಾಮಕೃಷ್ಣ, ಟಿ.ಎ. ಶಿರೋಳ, ಹನಮಂತ ಚಿತ್ರಗಾರ, ಮಹಾಂತೇಶ ಮಲ್ಲಾರಿ ಹಾಗೂ ಪ್ರಶಾಂತ ವಾಲ್ಮೀಕಿ ಅವರಿಗೆ ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದ ಸಂಚಾಲಕರು ಹಾಗೂ ಶಿಕ್ಷಕ-ಸಾಹಿತಿ ಎಸ್.ಕೆ. ಆಡಿನ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಷಾ ಉಡತೆ ಅವರು ಕಾರ್ಯಕ್ರಮ ನಿರೂಪಿಸಿದರು.
ಕಸಾಪ ಗದಗ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶಿಕ್ಷರಾಗಿರುವ ಎಸ್.ಕೆ. ಆಡಿನ ಅವರು ಸಾಹಿತ್ತಿಕವಾಗಿಯೂ ಆಸಕ್ತಿ ಹೊಂದಿದ್ದಾರೆ. ಈ ಉದ್ದೇಶ ಇಟ್ಟುಕೊಂಡು ಸ್ಥಾಪಿಸಿರುವ ಸಂಸ್ಥೆ ಸಮಾಜದಲ್ಲಿ ಎಲೆ ಮರೆಕಾಯಿಯಂತೆ ಇರುವ ಸಾಧಕರನ್ನು ಗುರುತಿಸಿ, ಸಮಾಜಕ್ಕೆ ಪರಿಚಯಿಸುವ ಕೆಲಸ ನಿರಂತರವಾಗಿರಲಿ ಎಂದು ಹೇಳಿದರು.
ಸಂಸ್ಥೆಯ ಲೋಗೋ ಬಿಡುಗಡೆ ಮಾಡಿದ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಈ ಸಂಸ್ಥೆಯು ಸಮಾಜಮುಖಿ ಕಾರ್ಯಗಳ ಮೂಲಕವೇ ಸಮಾಜಕ್ಕೆ ತೆರೆದುಕೊಂಡಿದೆ. ಸಾಧಕರಿಗೆ ಸನ್ಮಾನ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತರಿಗೆ ಪುರಸ್ಕಾರ, ಕವಿಗೋಷ್ಠಿ ಆಯೋಜಿಸುವ ಮೂಲಕ ಸಂಸ್ಥೆಯು ಉತ್ತಮ ಆರಂಭ ಮಾಡಿದೆ. ಆಡಿನ ಕುಟುಂಬದ ಮೂಲ ಹಾಗೂ ನನ್ನೂರು ಮಾಲಗಿತ್ತಿ. ಅಂತಹ ಊರಿನಿಂದ ಬಂದು, ಇದೀಗ ಒಂದು ಸಂಸ್ಥೆಯನ್ನು ಸ್ಥಾಪಿಸಿರುವುದು ಹೆಮ್ಮೆಯ ವಿಷಯ ಎಂದ ಅವರು, ಮಾಲಗಿತ್ತಿಗೆ ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳು ಮಾಡಿದ ಉಪಕಾರವನ್ನೂ ಸ್ಮರಿಸಿದರು.