ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕುಗಳ ಬಹುತೇಕ ಎಲ್ಲ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೂ ಸಹ ಜೆಜೆಎಂ ಕಾಮಗಾರಿ ಶೇ.97ರಷ್ಟು ಮುಗಿದಿದೆ ಎಂದು ತೋರಿಸುತ್ತಿದ್ದೀರಿ ಇದು ಹೇಗೆ ಸಾಧ್ಯ? ತಪ್ಪು ಮಾಹಿತಿ ನೀಡಿ ಎಲ್ಲರನ್ನೂ ಯಾಮಾರಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಶಾಸಕ ಡಾ. ಚಂದ್ರು ಲಮಾಣಿ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.
ಅವರು ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶನಿವಾರ ಜರುಗಿದ ಕುಡಿಯುವ ನೀರಿನ ಸಮಸ್ಯೆ ಕುರಿತ ವಿಶೇಷ ಸಭೆಯಲ್ಲಿ ಮಾತನಾಡಿ, ಜೆಜೆಎಂ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಆದರೆ ಕೇವಲ ಬಿಲ್‌ಗಾಗಿ ನೀವು ಶೇ.97 ಪ್ರಗತಿ ತೋರಿಸುತ್ತೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಂಕಿ ಅಂಶಗಳೊಂದಿಗೆ ಮಾತನಾಡಿದ ಶಾಸಕರು, ಸುಮ್ಮನೇ ತಪ್ಪು ವರದಿ ನೀಡಬೇಡಿ ಎಂದು ಎಚ್ಚರಿಕೆ ನೀಡಿದರು. ಇದೀಗ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದು, ಜನರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸುವದು ಅಗತ್ಯವಾಗಿದೆ. ಪಶು ವೈದ್ಯಕೀಯ ಇಲಾಖೆಯವರು ಜಾನುವಾರುಗಳಿಗೆ ಮೇವಿನ ಕೊರತೆಯಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದರಲ್ಲದೆ, ಜಾನುವಾರುಗಳಿಗೆ ಕುಡಿಯುವ ನೀರು ಕಲ್ಪಿಸುವ ಅವಶ್ಯಕ ಮಾಹಿತಿ ನೀಡುವಂತೆ ತಾಕೀತು ಮಾಡಿದರು.
ಸಭೆಯಲ್ಲಿ ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಲಕ್ಷ್ಮೇಶ್ವರ ತಹಸೀಲ್ದಾರ ವಾಸುದೇವ ವಿ.ಸ್ವಾಮಿ, ಶಿರಹಟ್ಟಿ ತಹಸೀಲ್ದಾರ ಅನಿಲ ಬಡಿಗೇರ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿದರು. 28 ಗ್ರಾ.ಪಂಗಳ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.