ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಎಥೆನಾಲ್ ಫ್ಯಾಕ್ಟರಿ ಪ್ರಾರಂಭದಿಂದ ನಮ್ಮ ಭಾಗದಲ್ಲಿ ಮೆಕ್ಕೆಜೋಳ, ಕಬ್ಬು, ಜೋಳ ಬೆಳೆಯುವ ರೈತರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿ ಉತ್ತಮ ಬೆಲೆ ಸಿಗಲಿದೆ. ಆದ್ದರಿಂದ ಲಕ್ಷ್ಮೇಶ್ವರ ತಾಲೂಕಿನಲ್ಲಿ ಪ್ರಾರಂಭಗೊಳ್ಳುತ್ತಿರುವ ಎಥೆನಾಲ್ ಫ್ಯಾಕ್ಟರಿ ಪ್ರಾರಂಭಕ್ಕೆ ಸರ್ಕಾರ ಯಾವುದೇ ಅಡೆ-ತಡೆ ಮಾಡಬಾರದು ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಶಂಕರಗೌಡ ಜಯನಗೌಡ್ರು ಹೇಳಿದರು.
ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಗದಗ ಜಿಲ್ಲೆ ಸೇರಿ ನೆರೆಯ ಜಿಲ್ಲೆಗಳಲ್ಲೂ ರೈತರು ಅತಿಹೆಚ್ಚು ಮೆಕ್ಕೆಜೋಳ ಬೆಳೆಯುತ್ತಾರೆ. ಈ ವರ್ಷ ಮೆಕ್ಕೆಜೋಳಕ್ಕೆ ಬೇಡಿಕೆ ಇಲ್ಲದ್ದರಿಂದ ರೈತರು ಬೆಂಬಲ ಬೆಲೆಗಾಗಿ ಉಪವಾಸ ಸತ್ಯಾಗ್ರಹ ಮಾಡಬೇಕಾಯಿತು. ಆದಾಗ್ಯೂ ಅನೇಕ ರೈತರು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಪೂರಕ ಕೈಗಾರಿಕೆಗಳು ಪ್ರಾರಂಭಗೊಳ್ಳಬೇಕು. ಎಥೆನಾಲ್ ಉತ್ಪಾದನೆಗಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸುವುದರಿಂದ ರೈತರಿಗೆ ಹೊಸ ಮಾರುಕಟ್ಟೆ ಲಭ್ಯವಾಗುತ್ತದೆ. ಲಕ್ಷ್ಮೇಶ್ವರ ತಾಲೂಕಿನ ಹೀರೆಮಲ್ಲಾಪೂರ ಗ್ರಾಮದಲ್ಲಿ ಎಥೆನಾಲ್ ಫ್ಯಾಕ್ಟರಿ ಪ್ರಾರಂಭವಾಗುತ್ತಿರುವುದು ಸಂತಸದ ವಿಚಾರ. ರೈತರರಿಗೆ ಲಾಭ, ಉದ್ಯೋಗ ಅವಕಾಶ, ಅಭಿವೃದ್ಧಿಗೆ ಕಾರಣವಾಗುತ್ತದೆ. ಕೃಷಿ ತ್ಯಾಜ್ಯವನ್ನು ಉಪಯುಕ್ತ ಸಂಪನ್ಮೂಲವಾಗಿ ಪರಿವರ್ತಿಸಿ ಗ್ರಾಮೀಣ ಆರ್ಥಿಕತೆಗೂ ನೆರವಾಗುತ್ತದೆ. ಹಾಗಾಗಿ ಕಂಪನಿ ನಿರ್ಮಾಣಕ್ಕೆ ಸರ್ಕಾರ ಅವಕಾಶ, ಅನುಮತಿ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶಂಕರಗೌಡ ಜಯನಗೌಡ್ರು, ಆದೇಶ ಹುಲಗೂರು, ಲಕ್ಷ್ಮವ್ವ ಮಳ್ಳಿಗಟ್ಟಿ, ಶರಣಪ್ಪ ಕಮ್ಮಾರ, ಯಲ್ಲಪ್ಪ ವಾಲ್ಮೀಕಿ, ಶಿವಪ್ಪನಾಯಕ ಮಳ್ಳಿಗಟ್ಟಿ, ಅದ್ಮಲ್ ರಹಮಾನ್ ಕಂಡೊಳಿ, ಈಶ್ವರ ಮಳ್ಳಿಗಟ್ಟಿ, ಮುತ್ತವ್ವ ವಾಲ್ಮೀಕಿ ಮತ್ತಿತರರಿದ್ದರು.
ಸರ್ಕಾರ ಹೀರೆಮಲ್ಲಾಪೂರ ಗ್ರಾಮದಲ್ಲಿನ ಎಥೆನಾಲ್ ಫ್ಯಾಕ್ಟರಿ ಪ್ರಾರಂಭಿಸಲು ಯಾವುದೇ ಅಡೆತಡೆ ಬರದಂತೆ ನೋಡಿಕೊಳ್ಳಬೇಕೆಂದು ಡಿ. 15ರ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಫ್ಯಾಕ್ಟರಿ ಎದುರಿನಲ್ಲಿಯೇ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಗುತ್ತಿದ್ದು, ಫ್ಯಾಕ್ಟರಿ ಪ್ರಾರಂಭವಾಗುವವರೆಗೂ ನಡೆಯುತ್ತದೆ ಎಂದು ಶಂಕರಗೌಡ ಜಯನಗೌಡ್ರು ತಿಳಿಸಿದರು.



