ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಜನವರಿ 26ರಂದು ಬೆಳಗಾವಿಯ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಉದ್ಯೋಗಕ್ಕಾಗಿ ಕನ್ನಡಿಗರ-ಯುವಜನರ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಳ್ಳಳಾಗಿದೆ ಎಂದು ಕೆಆರ್‌ಎಸ್ ಜಿಲ್ಲಾಧ್ಯಕ್ಷ ವೀರನಗೌಡ ಮೂಗನೂರ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರದ ದುರಾಡಳಿತ, ಭ್ರಷ್ಟಾಚಾರ ರಾಜ್ಯದಲ್ಲಿ ನಿರುದ್ಯೋಗ ವ್ಯಾಪಕವಾಗಿ ವೃದ್ಧಿಸಲು ಕಾರಣವಾಗಿದೆ. ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಅನೇಕ ಉದ್ಯೋಗಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಈ ಸಮಸ್ಯೆ ನಿವಾರಿಸಿ, ರಾಜ್ಯದ ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗುವಂತೆ ಮಾಡಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯ ಸರಕಾರದಲ್ಲಿ ಸುಮಾರು 3 ಲಕ್ಷ ಉದ್ಯೋಗಗಳು ಖಾಲಿ ಇವೆ. ಇನ್ನು, ರಾಜ್ಯದೆಲ್ಲೆಡೆ ಸ್ಥಾಪನೆಯಾಗುವ ಹಾಗೂ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಉದ್ಯಮಗಳಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ. ಜೊತೆಗೆ ಸರಕಾರ ಖಾಯಂ ನೇಮಕಾತಿ ಮಾಡದೇ ಅವಶ್ಯಕತೆಗೆ ಅನುಗುಣವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡು ಜೀತ ಪದ್ಧತಿ ಅನುಸರಿಸುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ಸರಕಾರವನ್ನು ಎಚ್ಚರಿಸಲು ಈ ಸಮಾವೇಶ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಸಪ್ಪ ಅರಗಂಜಿ, ಫಕೀರಗೌಡ ತಮ್ಮನಗೌಡ್ರ, ಫಾರೂಕ್ ಕಟ್ಟಿಮನಿ, ಖಾದರ್ ತೆಕ್ಕಲಕೋಟೆ, ಮೌಲಾಸಾಬ ಪೆಂಡಾರಿ, ಆರೀಫ್ ಮುಳಗುಂದ, ಸುರೇಶ ಮುಳಗುಂದ, ಮಂಜುನಾಥ ಬೊಮ್ಮನಗೌಡ್ರ, ಸದ್ದಾಮ್ ವಾಲೀಕಾರ, ಶಿವಕುಮಾರ ಕರಬಶೆಟ್ಟರ್, ಎಸ್.ಎನ್. ಪಾಟೀಲ ಉಪಸ್ಥಿತರಿದ್ದರು.